50ರ ಹೊಸ್ತಿಲಲ್ಲಿ ಮಾಧ್ಯಮಗಳಿಗೆ ಸಚಿನ್ ಧನ್ಯವಾದ ಮುಂಬೈ: ಆಟಗಾರರ ಉತ್ತಮ ಸಾಧನೆಗಳನ್ನು ಗುರುತಿಸಿ ಶ್ಲಾಘಿಸುವ ಮಾಧ್ಯಮಗಳ ಕಾರ್ಯ ಬಹಳ ದೊಡ್ಡದು. ಇದರಿಂದಾಗಿ ಆಟಗಾರರ ಸಾಮರ್ಥ್ಯವು ಮತ್ತಷ್ಟು ಉತ್ತಮಗೊಳ್ಳುತ್ತದೆ. ಜೊತೆಗೆ ಸಾಧಿಸುವ ಛಲ ಬೆಳೆಯುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ‘ನಾನು ಆಡುವಾಗ ಮಾಧ್ಯಮಗಳು ನೀಡಿದ ಪ್ರೋತ್ಸಾಹದಿಂದ ಬಹಳಷ್ಟು ಸಾಧನೆ ಮಾಡಲು ಸಾಧ್ಯವಾಯಿತು. ನಾನು ಎಷ್ಟೋ ಸಲ ವಿಫಲನಾಗಿದ್ದೆ. ಕೆಲವು ಸಲ ಕುಸಿದುಹೋಗಿದ್ದೆ. ಆದರೆ ಈ ಸುಂದರ ಆಟವು ನನಗೆ ಮರಳಿ ಎದ್ದು ನಿಲ್ಲುವುದನ್ನು ಕಲಿಸಿತು. ಮುಂದೆ ಸಾಗುವುದನ್ನು ಕಲಿಸಿತು. ಅದಕ್ಕೆ ಇಂಧನ (ಶಕ್ತಿ) ತುಂಬಿದವರು ನೀವು. ಇಂಧನವಿಲ್ಲದ ವಾಹನವು ಮುಂದೆ ಸಾಗುವುದಿಲ್ಲ. ನನ್ನ ಬೆಳವಣಿಗೆಯಲ್ಲಿ ತಮ್ಮೆಲ್ಲರ ಪಾತ್ರ ಬಹಳ ಮಹತ್ವದ್ದಾಗಿದೆ ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಸಚಿನ್ ಇದೇ 24ರಂದು ಐವತ್ತನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅದರ ಪೂರ್ವಭಾವಿಯಾಗಿ ಶುಕ್ರವಾರ ಸುದ್ದಿಗಾರರು ಇಲ್ಲಿ ಸಚಿನ್ ಅವರನ್ನು ಭೇಟಿಯಾಗಿ ಶುಭ ಕೋರಿದರು. ‘ನನ್ನ ವೃತ್ತಿ ಜೀವನದ ಮೊದಲ ಸಂದರ್ಶನದಿಂದ ಹಿಡಿದು ಕೊನೆಯವರೆಗೂ ಉತ್ತಮ ಪಯಣ ನಮ್ಮದಾಗಿತ್ತು. ಆರಂಭದಲ್ಲಿ ಪತ್ರಕರ್ತ– ಆಟಗಾರ ಸಂಬಂಧ ಮಾತ್ರ ನಮ್ಮದಾಗಿತ್ತು. ವರ್ಷಗಳು ಕಳೆದಂತೆ ನಾವೆಲ್ಲರೂ ಉತ್ತಮ ಸ್ನೇಹಿತರಾದೆವು’ ಎಂದು ನೆನಪಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.