2023: ಬೆಂಗಳೂರಿಗೆ ‘ರಾಯಲ್ಸ್‌’ ಸವಾಲು ಬೆಂಗಳೂರು: ರನ್‌ ಹೊಳೆ ಹರಿಸುತ್ತಿರುವ ಫಫ್ ಡುಪ್ಲೆಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ರಾಜಸ್ಥಾನ ರಾಯಲ್ಸ್‌ ಬಳಗವನ್ನು ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಬೆಂಗಳೂರು ತಂಡಕ್ಕೆ ‘ಮುಯ್ಯಿ’ ತೀರಿಸಿಕೊಳ್ಳುವ ಅವಕಾಶವೂ ಹೌದು. ಹೋದ ವರ್ಷದ ಐಪಿಎಲ್‌ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ತಂಡವು ಆರ್‌ಸಿಬಿಯನ್ನು ಸೋಲಿಸಿತ್ತು. ಆಂದು ಶತಕ ಬಾರಿಸಿದ್ದ ಜೋಸ್ ಬಟ್ಲರ್ ಈ ಬಾರಿಯೂ ಉತ್ತಮ ಲಯದಲ್ಲಿದ್ದಾರೆ. ಶನಿವಾರ ಸಂಜೆ ಬಟ್ಲರ್ ಮತ್ತು ಅಶ್ವಿನ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಆತಿಥೇಯ ಬೌಲರ್‌ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ತಂಡವನ್ನು ಸೋಲಿಸಲು ಆರ್‌ಸಿಬಿ ವಿಭಿನ್ನ ತಂತ್ರಗಾರಿಕೆ ರೂಪಿಸುವುದು ಅನಿವಾರ್ಯ. ಬೆಂಗಳೂರು ತಂಡಕ್ಕೆ ಡುಪ್ಲೆಸಿ, ವಿರಾಟ್ ಮತ್ತು ಮ್ಯಾಕ್ಸ್‌ವೆಲ್ ಮಾತ್ರ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ದಿನೇಶ್ ಕಾರ್ತಿಕ್ ಸೇರಿದಂತೆ ಉಳಿದ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಫಫ್ ಒಟ್ಟು 344 ಹಾಗೂ ವಿರಾಟ್ 279 ರನ್‌ಗಳನ್ನು ಗಳಿಸಿದ್ದಾರೆ. ಇಬ್ಬರೂ ತಲಾ ನಾಲ್ಕು ಅರ್ಧಶತಕ ಗಳಿಸಿದ್ದಾರೆ. ಆರ್‌ಸಿಬಿ ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಇವರಷ್ಟೇ ಮಿಂಚಿದ್ದಾರೆ. ಇತ್ತೀಚೆಗೆ ಮೊಹಾಲಿಯ ಗೆಲುವಿನಲ್ಲಿಯೂ ಇವರದ್ದೇ ಮಹತ್ವದ ಪಾತ್ರವಿತ್ತು. ಅದರಿಂದಾಗಿ ರಾಜಸ್ಥಾನ ಬೌಲರ್‌ಗಳ ಪ್ರಮುಖ ಗುರಿ ಇವರನ್ನು ಕಟ್ಟಿಹಾಕುವುದು ಎಂಬುದರಲ್ಲಿ ಆನುಮಾನವಿಲ್ಲ. ಈ ಹಿಂದೆ ಬೆಂಗಳೂರು ತಂಡದಲ್ಲಿ ಆಡಿದ್ದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಈಗ ರಾಜಸ್ಥಾನ ತಂಡದಲ್ಲಿದ್ದಾರೆ. ಇಲ್ಲಿಯ ಪಿಚ್‌ ಬಗ್ಗೆ ಅರಿವು ಇರುವ ಚಾಹಲ್ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. ಅವರೊಂದಿಗೆ ಸಂದೀಪ್ ಶರ್ಮಾ ಹಾಗೂ ಅಶ್ವಿನ್ ಕೂಡ ಇದ್ದಾರೆ. ಆದರೆ ಆರ್‌ಸಿಬಿಯ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಬೇಕಿದೆ. ಫಫ್ ಬಳಗದಲ್ಲಿ ಮೊಹಮ್ಮದ್ ಸಿರಾಜ್ ಮಾತ್ರ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪವರ್‌ಪ್ಲೇನಲ್ಲಿ ವಿಕೆಟ್‌ ಗಳಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಆದ್ದರಿಂದ ರಾಜಸ್ಥಾನದ ಆರಂಭಿಕ ಜೋಡಿ ಬಟ್ಲರ್ ಹಾಗೂ ಜೈಸ್ವಾಲ್ ಅವರಿಗೆ ಸಿರಾಜ್ ಸಿಂಹಸ್ವಪ್ನವಾದರೆ ಅಚ್ಚರಿಯಿಲ್ಲ. ಆದರೆ ಇನ್ನೊಂದು ಬದಿಯಿಂದ ಸ್ಥಳೀಯ ಹುಡುಗ ವೈಶಾಖ ವಿಜಯಕುಮಾರ್, ಹರ್ಷಲ್ ಪಟೇಲ್ ಹಾಗೂ ಸ್ಪಿನ್ನರ್ ಹಸರಂಗಾ ಕೂಡ ತಕ್ಕ ಜೊತೆ ನೀಡಿದರೆ ಎದುರಾಳಿ ಪಡೆಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬಹುದು. ಏಕೆಂದರೆ ರಾಜಸ್ಥಾನದ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು, ಹೆಟ್ಮೆಯರ್, ಕನ್ನಡಿಗ ದೇವದತ್ತ ಪಡಿಕ್ಕಲ್ ಹಾಗೂ ರಿಯಾನ್ ಪರಾಗ್ ಲಯ ಅಸ್ಥಿರವಾಗಿದೆ. ಅವರು ಫಾರ್ಮ್‌ಗೆ ಮರಳದಂತೆ ನೋಡಿಕೊಳ್ಳುವುದು ಕೂಡ ಆರ್‌ಸಿಬಿ ಬೌಲರ್‌ಗಳ ಮುಂದಿರುವ ಸವಾಲು. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಪ್ಲೇ ಆಫ್‌ ಹಂತಕ್ಕೆ ಅರ್ಹತೆ ಪಡೆಯಲು ಇನ್ನುಳಿದ ಎಂಟು ಪಂದ್ಯಗಳಲ್ಲಿ ಗೆಲುವುಗಳ ಅವಶ್ಯಕತೆ ಇದೆ. ತಂಡವು ತವರಿನಂಗಳದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದೆ. ಅದರಲ್ಲಿ ಎರಡು ಜಯಿಸಿದೆ, ಎರಡರಲ್ಲಿ ಸೋತಿದೆ. ಆ ಎಲ್ಲ ಹಣಾಹಣಿಗಳಲ್ಲಿಯೂ ರನ್‌ಗಳ ಹೊಳೆ ಹರಿದಿತ್ತು. ಈ ಪಂದ್ಯದಲ್ಲಿಯೂ ಬ್ಯಾಟರ್‌ಗಳ ಅಬ್ಬರ ಮೇರೆ ಮೀರುವ ನಿರೀಕ್ಷೆಯಿದೆ. ಬಲಾಬಲ ಪಂದ್ಯಗಳು: 28 ಬೆಂಗಳೂರು ಜಯ;13 ರಾಜಸ್ಥಾನ; 12 ಫಲಿತಾಂಶ;3 – ಗರಿಷ್ಠ ಸ್ಕೋರ್ ಆರ್‌ಸಿಬಿ; 200 ರಾಜಸ್ಥಾನ;217 ಕನಿಷ್ಠ ಸ್ಕೋರ್ ಆರ್‌ಸಿಬಿ;70 ರಾಜಸ್ಥಾನ;58 - - ಆರ್‌ಸಿಬಿಗೆ ಹಸಿರು ಪೋಷಾಕು ರಾಜಸ್ಥಾನ ಎದುರಿನ ಪಂದ್ಯದಲ್ಲಿ ಬೆಂಗಳೂರು ತಂಡವು ಪರಿಸರಸ್ನೇಹಿ ಸಂದೇಶ ನೀಡಲು ಹಸಿರು ಪೋಷಾಕು ಧರಿಸಿ ಕಣಕ್ಕಿಳಿಯಲಿದೆ. ಆರ್‌ಸಿಬಿಯು ಈ ಹಣಾಹಣಿಯನ್ನು ‘ಹಸಿರು ಪಂದ್ಯ’ ಎಂದು ಘೋಷಿಸಿದೆ. 2011ರಿಂದಲೂ ಪ್ರತಿ ವರ್ಷ ಒಂದು ಪಂದ್ಯದಲ್ಲಿ ಹಸಿರು ಪೋಷಾಕು ತೊಟ್ಟು ಆಟಗಾರರು ಆಡುತ್ತಾರೆ. ಜೊತೆಗೆ ನೆಲ ಜಲ ಮತ್ತು ಅರಣ್ಯ ಸಂರಕ್ಷಣೆಯ ಸಂದೇಶಗಳನ್ನು ನೀಡುತ್ತಾರೆ. ಆರ್‌ಸಿಬಿ ಅಭಿಮಾನಿ ಬಳಗವು ಗ್ರೀನ್ ಆರ್ಮಿಯಾಗಿ ಕ್ರೀಡಾಂಗಣದೊಳಗೆ ಮತ್ತು ಹೊರಗಿನ ಸ್ವಚ್ಛತೆಯನ್ನು ಪ್ರಚಾರಗೊಳಿಸುತ್ತದೆ ಎಂದು ಆರ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. – - - ಮಸಾಲೆ ದೋಸೆ ಸವಿದ ವಿರಾಟ್ ದಂಪತಿ ಆರ್‌ಸಿಬಿ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಭಾನುವಾರ ಬೆಂಗಳೂರಿನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದರು. ಮಲ್ಲೇಶ್ವರಂನಲ್ಲಿರುವ ಸಿಟಿಆರ್‌ (ಸೆಂಟ್ರಲ್ ಟಿಫನ್ ರೂಂ) ಹೋಟೆಲ್‌ಗೆ ಬೆಳಿಗ್ಗೆ ತೆರಳಿದ್ದರು. ಗರಿ ಗರಿಯಾದ ಮಸಾಲೆ ದೋಸೆ ಬೋಂಡಾ ಹಾಗೂ ಕೇಸರಿಬಾತ್ ಸವಿದರು. ಈ ತಿನಿಸುಗಳ ಚಿತ್ರವನ್ನು ಅನುಷ್ಕಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್ ಹೊರಗೆ ಅಭಿಮಾನಿಗಳ ದೊಡ್ಡ ದಂಡು ಸೇರಿತ್ತು. ಹೋಟೆಲ್‌ ನೊಳಗೆ ಹಾಗೂ ಹೊರಗೆ ವಿರಾಟ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು. - - ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಫ್ ಡುಪ್ಲೆಸಿ (ನಾಯಕ) ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ದಿನೇಶ್ ಕಾರ್ತಿಕ್ ಮಹಿಪಾಲ್ ಲೊಮ್ರೊರ್ ಶಾಬಾಜ್ ಅಹಮದ್ ವಣಿಂದು ಹಸರಂಗಾ ಸುಯಶ್ ಪ್ರಭುದೇಸಾಯಿ ಹರ್ಷಲ್ ಪಟೇಲ್ ವೇಯ್ನ್ ಪಾರ್ನೆಲ್ ಮೊಹಮ್ಮದ್ ಸಿರಾಜ್ ವೈಶಾಖ ವಿಜಯಕುಮಾರ್ ಕರ್ಣ ಶರ್ಮಾ ಆಕಾಶ್ ದೀಪ್ ಮಿಚೆಲ್ ಬ್ರೇಸ್‌ವೆಲ್ ಅನುಜ್ ರಾವತ್ ಫಿನ್ ಅಲೆನ್. ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ–ವಿಕೆಟ್‌ಕೀಪರ್) ಯಶಸ್ವಿ ಜೈಸ್ವಾಲ್ ಜೋಸ್ ಬಟ್ಲರ್ ದೇವದತ್ತ ಪಡಿಕ್ಕಲ್ ಶಿಮ್ರಾನ್ ಹೆಟ್ಮೆಯರ್ ರಿಯಾನ್ ಪರಾಗ್ ಧ್ರುವ್ ಜುರೇಲ್ ಆರ್. ಅಶ್ವಿನ್ ಜೇಸನ್ ಹೋಲ್ಡರ್ ಟ್ರೆಂಟ್ ಬೌಲ್ಟ್ ಸಂದೀಪ್ ಶರ್ಮಾ ಯಜುವೇಂದ್ರ ಚಾಹಲ್ ನವದೀಪ್ ಸೈನಿ ಮುರುಗನ್ ಅಶ್ವಿನ್ ಕೆ.ಸಿ. ಕಾರ್ಯಪ್ಪ. ಪಂದ್ಯ ಆರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಜಿಯೊ ಸಿನೆಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.