ಬೆಳಕಿನ ಆಚೀಚೆಯ ಮಿಂಚುಹುಳುಗಳು ‘ಐಪಿಎಲ್ ಎಂದರೆ ಬರೀ ಬೌಂಡರಿ, ಸಿಕ್ಸರ್‌ಗಳಲ್ಲ. ವಿಕೆಟ್‌ ಮತ್ತು ರನ್‌ ಗಳಿಕೆಯೂ ಅಲ್ಲ. ಅದರೊಳಗೆ ಮತ್ತು ಹೊರಗೆ ಒಂದು ಪ್ರಪಂಚ ಇದೆ. ಅಲ್ಲಿ ನನ್ನಂತಹವರಿಗೂ ಸ್ಟಾರ್ ವ್ಯಾಲ್ಯೂ ಇದೆ...’ ಚಂದನವನದ ಹಿನ್ನೆಲೆ ಸಂಗೀತದ ಕಲಾವಿದ ಡ್ರಮ್ ದೇವಾ ಅವರ ಭಾವುಕ ನುಡಿಗಳಿವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿಯೇ ಬೌಂಡರಿ ಲೈನ್‌ಗೆ ಬಂದು ಡ್ರಮ್ ದೇವಾ ಅವರ ಬೀಟ್ಸ್‌ಗೆ ಹೆಜ್ಜೆ ಹಾಕಿದ್ದರು. ಇದನ್ನು ನೋಡಿ ಗ್ಯಾಲರಿಯೊಳಗಿನ ಜನ ಹುಚ್ಚೆದ್ದು ಕುಣಿದಿದ್ದರು. ‘ಟ್ವಿಂಕಲ್.. ಟ್ವಿಂಕಲ್ ಲಿಟ್ಲ್ ಸ್ಟಾರ್.. ದೇವಾ ಈಸ್ ಎ ಸೂಪರ್ ಸ್ಟಾರ್..’ ಎಂಬ ಕೂಗುಗಳು ಮುಗಿಮುಮುಟ್ಟಿದ್ದವು. 2008ರಿಂದಲೇ ದೇವಾ ಐಪಿಎಲ್‌ನಲ್ಲಿ ಡ್ರಮ್ ನುಡಿಸುತ್ತಿದ್ದಾರೆ. ಅವರ ಹುಲಿಕುಣಿತ, ಟಪ್ಪಾಂಗುಚ್ಚಿ ಮತ್ತು ಇಂಗ್ಲಿಷ್ ಬೀಟ್ಸ್‌ಗಳಿಗೆ ಜನ ಮೈಮರೆತು ನರ್ತಿಸುತ್ತಾರೆ. ನಾಲ್ಕು ವರ್ಷಗಳ ನಂತರ ಬೆಂಗಳೂರಿಗೆ ಮರಳಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌, ದೇವಾ ಸೇರಿದಂತೆ ಹಲವಾರು ಜನರಿಗೆ ತಾರಾಪಟ್ಟ ಸಿಗುವಂತೆ ಮಾಡಿದೆ. ಅವರೆಲ್ಲರೂ ಸೇರಿ ಐಪಿಎಲ್‌ ವೈಭವವನ್ನು ನೂರ್ಮಡಿಗೊಳಿಸುತ್ತಿದ್ದಾರೆ. ವಿವಿಧ ವೇಷ ಧರಿಸಿ ಬರುವ ಸೂಪರ್ ಫ್ಯಾನ್‌ ಸುಗುಮಾರ್‌, ದೇಶ, ವಿದೇಶಗಳಿಂದ ಬರುವ ಚಿಯರ್ ಲೀಡರ್‌ಗಳು, ಅಬ್ಬರದ ಸಂಗೀತದ ಮೂಲಕ ಮನರಂಜಿಸುವ ಡಿಜೆ, ಆರ್‌ಜೆಗಳ ತಂಡಗಳು ಅಥವಾ ಕ್ರೀಡಾಂಗಣದೊಳಗಿನ ಪಂದ್ಯ, ಸಡಗರಗಳನ್ನು ಹೊರಗಿನ ಜಗತ್ತಿಗೆ ಟಿ.ವಿ. ಮೂಲಕ ಪ್ರಚುರ ಪಡಿಸುವ ದೊಡ್ಡ ತಾಂತ್ರಿಕ ತಂಡಗಳು... ಐಪಿಎಲ್ ಯಶಸ್ಸಿನ ಪಾಲುದಾರಿಕೆಯಲ್ಲಿ ಇವರೆಲ್ಲ ಇದ್ದಾರೆ. ಐಪಿಎಲ್ ಬರೀ ಕ್ರಿಕೆಟ್ ಆಟವಲ್ಲ; ಅದೊಂದು ಮನರಂಜನೆಯ ಕಣಜ ಹಾಗೂ ಉದ್ಯಮ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದರಲ್ಲೂ ಈ ಸಲ ಬೇಸಿಗೆಯ ಬಿಸಿಯನ್ನೂ ಮೀರಿಸಿದ ಕ್ರಿಕೆಟ್ ಕಾವು ಆವರಿಸಿದೆ. ಒಂದೇ ತಿಂಗಳಲ್ಲಿ ಐಪಿಎಲ್ ಟೂರ್ನಿಯ ಆರು ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಲಭಿಸಿದೆ. ಕೋವಿಡ್ ಕಾಲದಲ್ಲಿ ಒಂದೇ ತಾಣದಲ್ಲಿ ಟೂರ್ನಿ ನಡೆದಿತ್ತು. ಆದರೆ ಈ ಬಾರಿ ತವರು ಹಾಗೂ ತವರಿನಾಚೆ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ. ಇದರಿಂದಾಗಿ ಐಪಿಎಲ್ ಪಂದ್ಯಗಳ ಸುತ್ತಮುತ್ತ ಚಟುವಟಿಕೆಗಳು ಗಮನ ಸೆಳೆಯುತ್ತಿವೆ. ಎಲ್‌ಇಡಿ ತಂಡ: ಒಂದು ಐಪಿಎಲ್ ಪಂದ್ಯದ ಯಶಸ್ಸಿನಲ್ಲಿ ಹತ್ತಾರು ವಿಭಾಗಗಳಲ್ಲಿ 500ಕ್ಕೂ ಹೆಚ್ಚು ಜನರ ಶ್ರಮವಿದೆ. ದುಬಾರಿ ಬೆಲೆಯ ಟಿಕೆಟ್‌ ಖರೀದಿಸಿ (ಆನ್‌ಲೈನ್‌ನಲ್ಲಿ, ಕೌಂಟರ್‌ನ ಗೌಜಿ ಗದ್ದದಲ್ಲಿ ಅಥವಾ ಕೆಲವೊಮ್ಮೆ ಕಾಳಸಂತೆಯಲ್ಲಿ) ಬಂದವರಿಗೆ ಮನರಂಜನೆ ಕೊಡಲು ಕ್ರಿಕೆಟ್ ಇದ್ದೇ ಇದೆ. ಆದರೆ ಈ ಜನದಟ್ಟಣೆಯ ಲಾಭ ತಮ್ಮ ಪಡೆಯಲು ಪ್ರಾಯೋಜಕರು ಮುಗಿಬೀಳುತ್ತಾರೆ. ಇದರಿಂದಾಗಿ ಒಂದಿಷ್ಟು ಉದ್ಯೋಗಾವಕಾಶಗಳೂ ಇಲ್ಲಿ ಹುಟ್ಟಿವೆ. ಬೌಂಡರಿ ಸುತ್ತ ಅಳವಡಿಸಿರುವ ಎಲ್‌ಇಡಿ ಬೋರ್ಡ್‌ಗಳು, ಸ್ಕೋರ್‌ ಬೋರ್ಡ್‌ಗಳ ಹಿಂದೆ ಕಾರ್ಯನಿರ್ವಹಿಸುವ ನಿಪುಣ ತಂತ್ರಜ್ಞರು ಹಾಗೂ ಅನಿಮೇಷನ್ ಕಲಾವಿದರ ತಂಡವಿದೆ. ‘ಇದೊಂದು ಅದ್ಭುತ ಲೋಕ. ನಾವು ಕೆಲಸ ಮಾಡುವುದರ ಜೊತೆಗೆ ಕ್ರಿಕೆಟ್ ಮತ್ತು ಕ್ರಿಕೆಟಿಗರನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತದೆ. ಉತ್ತಮ ಆದಾಯವೂ ಇದೆ. ಅಧಿಕೃತ ಪ್ರಸಾರಕರ ಮೂಲಕ ಟಿವಿ ಹಾಗೂ ಆ್ಯಪ್ ವೀಕ್ಷಕರಿಗೆ ಅಂಕಿ ಸಂಖ್ಯೆ, ಜಾಹೀರಾತು ಮತ್ತು ಅನಿಮೇಷನ್‌ಗಳನ್ನು ತಲುಪಿಸುವುದು ನಮ್ಮ ಕೆಲಸ. ವಿವಿಧ ತಂಡಗಳೊಂದಿಗೆ ಸಂಯೋಜನೆ ಮಾಡಿಕೊಂಡು ಕಾರ್ಯನಿರ್ವಹಿಸುವುದು ಒಳ್ಳೆಯ ಅನುಭವ. ಕ್ರೀಯಾಶೀಲ ಜಗತ್ತು ಇದು‘ ಎಂದು ತಂತ್ರಜ್ಞ ರಾಜಶೇಖರ್ ಹೇಳುತ್ತಾರೆ. ಇದೆಲ್ಲಕ್ಕೆ ಕಳಶವಿಟ್ಟಂತೆ ಆಟ ಮತ್ತು ತಂಡಗಳ ಅಭ್ಯಾಸಕ್ಕಾಗಿ ಅಂಗಳವನ್ನು ಒಪ್ಪ ಓರಣಗೊಳಿಸುವ ಕ್ರೀಡಾಂಗಣ ಸಿಬ್ಬಂದಿಯ ಕಾರ್ಯಕ್ಕೆ ಬೆಲೆ ಕಟ್ಟಲಾಗದು.ಬ್ಯಾಟರ್‌ಗಳು ಹರಿಸುವ ರನ್‌ಗಳ ಹೊಳೆಯ ಹಿಂದೆ ಈ ಸಿಬ್ಬಂದಿಯ ಬೆವರಹನಿಗಳು ಇರುತ್ತವೆ. ಪ್ರತಿ ಪಂದ್ಯಕ್ಕೂ 35–40 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ನಿವೃತ್ತ ಕ್ರಿಕೆಟಿಗರಿಗೂ ಐಪಿಎಲ್ ಅಕ್ಷಯಪಾತ್ರೆ. ಕಾಮೆಂಟ್ರಿ, ಅಂಪೈರಿಂಗ್, ಸ್ಕೋರಿಂಗ್, ತಂಡಗಳ ಕೋಚಿಂಗ್ ಸಿಬ್ಬಂದಿ ಕೆಲಸಗಳು ಅವರನ್ನು ಕೈಬೀಸಿ ಕರೆಯುತ್ತಿದೆ. ಜೂನಿಯರ್ ಕ್ರಿಕೆಟಿಗರಿಗೂ ನೆಟ್ ಬೌಲರ್ ಆಗಿ, ಬಾಲ್‌ ಬಾಯ್ ಆಗಿ ತಂಡಗಳೊಂದಿಗೆ ಮತ್ತು ದೊಡ್ಡ ಕ್ರಿಕೆಟಿಗರೊಂದಿಗೆ ಒಡನಾಡುವ ಅವಕಾಶ ಲಭಿಸುತ್ತಿದೆ. ಇನ್ನು ಕ್ರೀಡಾಂಗಣದ ಹೊರಗೂ ಒಂದು ಲೋಕವಿದೆ. ಅದು ಅಸಂಘಟಿತ ಜಗತ್ತು. ದೂರದ ರಾಜ್ಯಗಳಿಂದ ಬರುವ ಹಲವರು ವಿರಾಟ್‌ ಕೊಹ್ಲಿ, ಮಹೇಂದ್ರಸಿಂಗ್ ಧೋನಿ ಮತ್ತಿತರ ತಾರೆಗಳ ಹೆಸರುಗಳನ್ನು ದೊಡ್ಡದಾಗಿ ಮುದ್ರಿಸಿರುವ ಟೀಶರ್ಟ್‌ಗಳು, ಕ್ಯಾಪ್‌ಗಳನ್ನು ಮಾರಾಟ ಮಾಡುತ್ತಾ ಒಂದಿಷ್ಟು ಹಣ ಜೇಬಿಗಿಳಿಸುವ ಪೈಪೋಟಿಗೆ ಬಿದ್ದಿರುತ್ತಾರೆ. ಇನ್ನೂ ಕೆಲವರು ಅಭಿಮಾನಿಗಳ ಮುಖದ ಮೇಲೆ ಅವರ ನೆಚ್ಚಿನ ತಂಡದ ಲೋಗೊ, ಧ್ವಜಗುರುತು ಅಥವಾ ಆಟಗಾರರ ಹೆಸರುಗಳನ್ನು ಪೇಂಟ್ ಮಾಡಿಕೊಡುತ್ತಾರೆ. ಈ ರೀತಿ ’ಸಿಂಗಾರ‘ ಮಾಡಿದರೆ ಕ್ರೀಡಾಂಗಣದೊಳಗೆ ತಮ್ಮ ಮೇಲೆ ಕ್ಯಾಮೆರಾ ಕಣ್ಣು ಬೀಳುವ ನಿರೀಕ್ಷೆ ಮುದ್ರೆ ಹಾಕಿಸಿಕೊಂಡವರದ್ದು. ಅದಕ್ಕಾಗಿಯೇ ಪಂದ್ಯ ಆರಂಭವಾಗುವ ಸಮಯಕ್ಕಿಂತ ಎರಡು ಗಂಟೆ ಮುಂಚೆಯೇ ಕ್ರೀಡಾಂಗಣದ ಮುಂದೆ ಹಾಜರಾಗಿರುತ್ತಾರೆ. ಇದರಿಂದಾಗಿ ಉಂಟಾಗುವ ಜನ–ವಾಹನದಟ್ಟಣೆಯು ಸಣ್ಣದಲ್ಲ. ಕೆಲವೊಮ್ಮೆ ರಾತ್ರಿ 12ರವರೆಗೂ ಜನಸಾಮಾನ್ಯರಿಗೆ ಇದರ ಬಿಸಿ ತಟ್ಟುವುದು ಸುಳ್ಳಲ್ಲ. ಆದರೆ ಇದೆಲ್ಲದರಾಚೆ ಐಪಿಎಲ್ ಪಂದ್ಯಗಳನ್ನು ನೋಡುವ ಆನಂದವೇ ಬೇರೆ. ’ಸಿನೆಮಾ ಮತ್ತಿತರ ಮನರಂಜನೆಗಳಿಗಿಂತ ಇದು ವಿಭಿನ್ನ. ಇಲ್ಲಿ ಕೃತ್ರಿಮ ಇಲ್ಲ. ಹೊಡೆದಾಟ, ಲವ್‌ ಸ್ಟೋರಿಗಳ ಡ್ರಾಮಾ ಇಲ್ಲ. ಆದರೆ ಆಟವಿದೆ. ಜೊತೆಗೆ ಸಂಗೀತ ನೃತ್ಯ ಮನರಂಜನೆಗಳೂ ಇವೆ. ಇಲ್ಲಿಗೆ ಬರುವುದರಿಂದ ಎಷ್ಟೋ ಜನ ಹೊಸ ಸ್ನೇಹಿತರೂ ಸಿಗುತ್ತಾರೆ. ಕ್ರಿಕೆಟ್ ನಮ್ಮೆಲ್ಲರನ್ನೂ ಕೂಡಿಸುತ್ತಿದೆ‘ ಎನ್ನುವ ವಸಂತಕುಮಾರ್ ಮತ್ತು ಸ್ನೇಹಿತರ ಬಳಗ ಮೊದಲಿನಿಂದಲೂ ಆರ್‌ಸಿಬಿ ಅಭಿಮಾನಿಗಳು. ಕಳೆದ 15 ವರ್ಷಗಳಿಂದಲೂ ಪ್ರಶಸ್ತಿ ಜಯಿಸಲು ಸಾಧ್ಯವಾಗದಿದ್ದರೂ ಆರ್‌ಸಿಬಿಯ ಜನಪ್ರಿಯತೆ ಕಡಿಮೆಯಾಗಿಲ್ಲ. ಕ್ರೀಡಾಂಗಣಕ್ಕೆ ಬಂದು ತಂಡವನ್ನು ಬೆಂಬಲಿಸುವ ಹುಮ್ಮಸ್ಸು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಇದು ಉದ್ಯಾನನಗರಿಯ ಕ್ರಿಕೆಟ್ ಅಭಿಮಾನಿಗಳ ಬೇಷರತ್‌ ಪ್ರೀತಿಯೋ ಅಥವಾ ಟೀಕಾಕಾರರು ಹೇಳುವಂತೆ ಜನ ಮರಳೋ ಜಾತ್ರೆ ಮರುಳೋ ಇರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.