2023: ಮುಂಬೈ ಮಣಿಸಿದ ಪಂಜಾಬ್‌ ಮುಂಬೈ: ಸ್ಯಾಮ್ ಕರನ್, ಹರಪ್ರೀತ್‌ ಸಿಂಗ್ ಬ್ಯಾಟಿಂಗ್ ಹಾಗೂ ಆರ್ಷದೀಪ್ ಸಿಂಗ್ ಅವರ ಬೌಲಿಂಗ್ ಬಲದಿಂದ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್‌ ಪಂದ್ಯದಲ್ಲಿ ಜಯ ಗಳಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ 13 ರನ್‌ಗಳಿಂದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಟಾಸ್‌ ಸೋತು ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ಪಂಜಾಬ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 214 ರನ್ ಗಳಿಸಿತು. ವೀರೋಚಿತ ಹೋರಾಟ ನಡೆಸಿದ ಮುಂಬೈ ಬ್ಯಾಟರ್‌ಗಳು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 201 ರನ್ ಗಳಿಸಿದರು. ಮುಂಬೈ ಪರ ಆರಂಭಿಕ ಬ್ಯಾಟರ್ ಇಶಾನ್ ಕಿಶನ್‌ (1) ವಿಫಲರಾದರು. ನಾಯಕ ರೋಹಿತ್‌ ಶರ್ಮಾ (44) ಹಾಗೂ ಕ್ಯಾಮರಾನ್ ಗ್ರೀನ್‌ (67) ಎರಡನೇ ವಿಕೆಟ್‌ಗೆ 76 ರನ್ ಸೇರಿಸಿದರು. 10ನೇ ಓವರ್‌ನಲ್ಲಿ ರೋಹಿತ್ ಔಟಾದ ಬಳಿಕ, ಸೂರ್ಯಕುಮಾರ್ ಯಾದವ್‌ (57) ಜೊತೆಗೂಡಿದ ಗ್ರೀನ್‌ 75 ರನ್ ಕಲೆಹಾಕಿದರು. ಇವರಿಬ್ಬರು ಕ್ರೀಸ್‌ ನಲ್ಲಿದ್ದಾಗ ಮುಂಬೈ ಗೆಲುವಿನ ಆಸೆ ಚಿಗುರಿತ್ತು. ಆದರೆ ಇವರಿಬ್ಬರ ವಿಕೆಟ್‌ ಗಳಿಸಿದ ಆರ್ಷದೀಪ್‌ ಸಿಂಗ್‌ (29ಕ್ಕೆ 4) ಹಾಗೂ ನೇಥನ್ ಎಲಿಸ್‌ ಪಂಜಾಬ್ ತಂಡದ ಮೇಲುಗೈಗೆ ಕಾರಣರಾದರು. ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 16 ರನ್ ಬೇಕಿತ್ತು. ಈ ಓವರ್‌ನಲ್ಲಿ ಅಮೋಘ ಬೌಲಿಂಗ್ ಸಾಮರ್ಥ್ಯ ತೋರಿದ ಆರ್ಷದೀಪ್‌ ಕೇವಲ ಎರಡು ರನ್ ನೀಡಿ ತಿಲಕ್‌ ವರ್ಮಾ ಹಾಗೂ ನೇಹಲ್ ವಧೇರಾ ಅವರ ವಿಕೆಟ್‌ ಗಳಿಸಿ ಪಂಜಾಬ್‌ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು. ಪಂಜಾಬ್ ಬೃಹತ್ ಮೊತ್ತ: ಇನಿಂಗ್ಸ್‌ ಕೊನೆಯ ಆರು ಓವರ್‌ಗಳಲ್ಲಿ ರನ್‌ಗಳ ಹೊಳೆ ಹರಿಸಿದ ಸ್ಯಾಮ್ ಕರನ್ ಹಾಗೂ ಹರಪ್ರೀತ್ (41) ಪಂಜಾಬ್‌ ಬೃಹತ್ ಮೊತ್ತ ಗಳಿಸಲು ಕಾರಣರಾದರು. ಸ್ಯಾಮ್ ಕರನ್ 29 ಎಸೆತಗಳಲ್ಲಿ 55 ರನ್ ಗಳಿಸಿದರು. ಅದರಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರು. ಪಂಜಾಬ್ ತಂಡವು 14 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 105 ರನ್ ಗಳಿಸಿತ್ತು. ಆದರೆ ಕೊನೆಯ 6 ಓವರ್‌ ಗಳಲ್ಲಿ 109 ರನ್‌ಗಳು ಹರಿದುಬಂದವು. ಕೊನೆಯಲ್ಲಿ ಜಿತೇಶ್‌ ಶರ್ಮಾ 7 ಎಸೆತಗಳಲ್ಲಿ 25 ರನ್ ದೋಚಿದರು. ಅರ್ಜುನ್ ತೆಂಡೂಲ್ಕರ್ ಅವರ ಒಂದು ಓವರ್‌ನಲ್ಲಿ 31 ರನ್‌ ಹರಿದುಬಂದವು. ಸೂರ್ಯ, ಸಿಂಗ್ ಸಾಧನೆ: ಮುಂಬೈನ ಸೂರ್ಯಕುಮಾರ್ ಈ ಪಂದ್ಯದ ಮೂಲಕ ಟಿ20 ಮಾದರಿಯಲ್ಲಿ 6,000 ರನ್‌ ಪೂರ್ಣಗೊಳಿಸಿದರು. ಪಂಜಾಬ್‌ನ ಆರ್ಷದೀಪ್‌ ಐಪಿಎಲ್‌ನಲ್ಲಿ (ಒಟ್ಟು 53) 50 ವಿಕೆಟ್‌ ಗಡಿ ದಾಟಿದರು. ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 214 (ಪ್ರಭಸಿಮ್ರನ್ ಸಿಂಗ್ 26, ಅಥರ್ವ ತೈಡೆ 29, ಹರಪ್ರೀತ್ ಸಿಂಗ್ 41, ಸ್ಯಾಮ್ ಕರನ್ 55, ಜಿತೇಶ್ ಶರ್ಮಾ 25, ಕ್ಯಾಮರಾನ್ ಗ್ರೀನ್ 41ಕ್ಕೆ2, ಪಿಯೂಷ್ ಚಾವ್ಲಾ 15ಕ್ಕೆ2). ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 201 (ರೋಹಿತ್ ಶರ್ಮಾ 44, ಕ್ಯಾಮರಾನ್ ಗ್ರೀನ್‌ 67, ಸೂರ್ಯ ಕುಮಾರ್ ಯಾದವ್‌ 57, ಟಿಮ್ ಡೇವಿಡ್‌ ಔಟಾಗದೆ 25; ಆರ್ಷದೀಪ್ ಸಿಂಗ್‌ 29ಕ್ಕೆ 4, ನೇಥನ್ ಎಲಿಸ್‌ 44ಕ್ಕೆ 1). ಫಲಿತಾಂಶ: ಪಂಜಾಬ್ ಕಿಂಗ್ಸ್‌ಗೆ 13 ರನ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.