2023: ಚೆನ್ನೈಗೆ ಮಣಿದ ಹೈದರಾಬಾದ್ ಚೆನ್ನೈ: ರವೀಂದ್ರ ಜಡೇಜ ಸ್ಪಿನ್ ಮೋಡಿ ಹಾಗೂ ಡೇವೊನ್ ಕಾನ್ವೆ ಅಜೇಯ ಅರ್ಧಶತಕದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಜಯಿಸಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ 7 ವಿಕೆಟ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ತಂಡವು 20 ಓವರ್‌ 7 ವಿಕೆಟ್‌ಗಳಿಗೆ 134 ರನ್‌ಗಳನ್ನು ಗಳಿಸಿತು. ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (34; 26ಎ), ರಾಹುಲ್ ತ್ರಿಪಾಠಿ (21; 21ಎ) ಹಾಗೂ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮಯಂಕ್ ಅಗರವಾಲ್ ಅವರ ವಿಕೆಟ್‌ಗಳನ್ನು ಜಡೇಜ ಗಳಿಸಿದರು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕವಾಡ (35; 30ಎ) ಹಾಗೂ ಡೇವೊನ್ ಕಾನ್ವೆ (ಅಜೇಯ 77; 57ಎಸೆತ) ಮೊದಲ ವಿಕೆಟ್ ಜೊತೆಯಾಟದಲ್ಲಿ 87 ರನ್‌ ಸೇರಿಸಿದರು. ಇದರಿಂದಾಗಿ ತಂಡವು 18.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 138 ರನ್‌ ಗಳಿಸಿತು. ವಿಕೆಟ್‌ ನಷ್ಟವಿಲ್ಲದೇ ಗೆಲುವು ಸಾಧಿಸುವ ಹಾದಿಯಲ್ಲಿದ್ದ ಚೆನ್ನೈ ತಂಡದ ಬ್ಯಾಟರ್ ಗಾಯಕವಾಡಗೆ ಅದೃಷ್ಟ ಕೈಕೊಟ್ಟಿತು. ಉಮ್ರಾನ್‌ ಮಲಿಕ್‌ ಹಾಕಿದ ಎಸೆತವನ್ನು ಡೇವೊನ್ ನೇರವಾಗಿ ಹೊಡೆದರು. ಉಮ್ರಾನ್ ಕ್ಯಾಚ್ ಮಾಡಲು ಪ್ರಯತ್ನಿಸಿದರು. ಆದರೆ ಕೈಗೆ ತುಸು ಸವರಿಕೊಂಡ ಚೆಂಡು ನಾನ್‌ಸ್ಟ್ರೈಕರ್ ಬದಿಯ ಸ್ಟಂಪ್‌ಗಳಿಗೆ ಅಪ್ಪಳಿಸಿತು. ಕ್ರೀಸ್‌ನಿಂದ ಹೊರಗಿದ್ದ ಗಾಯಕವಾಡ ರನೌಟ್ ಆದರು. 15ನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ ಹಾಗೂ 17ನೇ ಓವರ್‌ನಲ್ಲಿ ಅಂಬಟಿ ರಾಯುಡು ವಿಕೆಟ್ ಗಳಿಸಿದ ಮಯಂಕ್ ಮರ್ಕಂಡೆ ಚೆನ್ನೈ ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೆ ಈ ಹಂತದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಡೇವೊನ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು ಒಟ್ಟು 12 ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದರು. ಇನಿಂಗ್ಸ್‌ನ ಆರಂಭದಲ್ಲಿ ಸನ್‌ರೈಸರ್ಸ್ ತಂಡದ ಹ್ಯಾರಿ ಬ್ರೂಕ್ (18; 13ಎ, 4X3) ಮತ್ತು ಅಭಿಷೇಕ್ ಅವರು ಬಿರುಸಿನ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಕೇವಲ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳು ಸೇರಿದ್ದವು. ಐದನೇ ಓವರ್‌ನಲ್ಲಿ ಆಕಾಶ್ ಸಿಂಗ್ ಎಸೆತದಲ್ಲಿ ಗಾಯಕವಾಡ ಪಡೆದ ಕ್ಯಾಚ್‌ಗೆ ಹ್ಯಾರಿ ನಿರ್ಗಮಿಸಿದರು. ನಂತರವೂ ಅಭಿಷೇಕ್ ತಮ್ಮ ಆಟ ಮುಂದುವರಿಸಿದರು. ಆದರೆ ವೇಗವಾಗಿ ರನ್‌ ಗಳಿಸಲಿಲ್ಲ. ಅವರು ಮತ್ತು ತ್ರಿಪಾಠಿ ಸೇರಿ ಎರಡನೇ ವಿಕೆಟ್‌ಗೆ 36 ರನ್ ಸೇರಿಸಿದರು. ಹತ್ತನೇ ಓವರ್‌ನಲ್ಲಿ ಜಡೇಜ ಕೈಚಳಕಕ್ಕೆ ಅಭಿಷೇಕ್ ಔಟಾದರು. ಇದರ ನಂತರ ಬಂದ ಬ್ಯಾಟರ್‌ಗಳು ದೊಡ್ಡ ಹೊಡೆತಕ್ಕೆ ಕೈಹಾಕಲಿಲ್ಲ. ಚೆನ್ನೈ ನಾಯಕ ಧೋನಿಯ ಸೂಚನೆಗಳನ್ನು ಅಚ್ಚುಕಟ್ಟಾಗಿ ಪಾಲಿಸಿದ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳಿಗೆ ತಡೆಯೊಡ್ಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.