2023 | ಸಿರಾಜ್ ಸ್ವಿಂಗ್‌ಗೆ ಶರಣಾದ ಪಂಜಾಬ್‌ ಕಿಂಗ್ಸ್ ಮೊಹಾಲಿ: ತಮ್ಮ ಪಕ್ಕೆಲುಬಿನ ಗಾಯದ ನೋವಿನಲ್ಲಿಯೂ ಅಬ್ಬರದ ಬ್ಯಾಟಿಂಗ್ ಮಾಡಿದ ಫಫ್ ಡುಪ್ಲೆಸಿ ಮತ್ತು ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಭೇರಿ ಬಾರಿಸಿತು. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 24 ರನ್‌ಗಳಿಂದ ಪಂಜಾಬ್ ಕಿಂಗ್ಸ್ ಎದುರು ಜಯಿಸಿತು. ಈ ಪಂದ್ಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ ನಿಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಶ್ರೇಯ ಆರ್‌ಸಿಬಿಗೆ ಸಲ್ಲುತ್ತದೆ. ಗಾಯಗೊಂಡಿದ್ದ ಫಫ್ ನಾಯಕತ್ವ ವಹಿಸಲಿಲ್ಲ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಫಫ್ (84; 56ಎ)ಮತ್ತು ಕೊಹ್ಲಿ (59; 47ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 137 ರನ್‌ಗಳನ್ನು ಸೇರಿಸಿದರು. ಆದರೆ ಪಂಜಾಬ್ ಬೌಲರ್‌ಗಳು ಬೆಂಗಳೂರು ತಂಡವನ್ನು 4 ವಿಕೆಟ್‌ಗಳಿಗೆ 174 ರನ್‌ಗಳಿಗೆ ನಿಯಂತ್ರಿಸಿದರು. ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ವೇಗಿ ಸಿರಾಜ್ (21ಕ್ಕೆ4) ತಡೆಯೊಡ್ಡಿದರು. ಶಿಖರ್ ಧವನ್ ಗಾಯದಿಂದಾಗಿ ವಿಶ್ರಾಂತಿ ಪಡೆದಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಪ್ರಭಸಿಮ್ರನ್ ಸಿಂಗ್ (46; 30ಎ) ಮತ್ತು ಜಿತೇಶ್ ಶರ್ಮಾ (41; 27ಎ) ಅವರಿಬ್ಬರ ಹೋರಾಟ ವ್ಯರ್ಥವಾಯಿತು. ತಂಡವು 18.2 ಓವರ್‌ಗಳಲ್ಲಿ 150 ರನ್ ಗಳಿಸಿ ಆಲೌಟ್ ಆಯಿತು. ಸಿರಾಜ್ ಇನಿಂಗ್ಸ್‌ ಆರಂಭದಲ್ಲಿ ಹೊಸ ಚೆಂಡಿನಲ್ಲಿ ಮತ್ತು ಕೊನೆಯ ಓವರ್‌ನಲ್ಲಿ ಮಿಂಚಿದರು. ಇದರಿಂದಾಗಿ ಟೂರ್ನಿಯಲ್ಲಿ ಆರ್‌ಸಿಬಿಯು ಮೂರನೇ ಜಯ ಸಾಧಿಸಲು ಸಾಧ್ಯವಾಯಿತು. ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಇನ್‌ಸ್ವಿಂಗರ್ ಮೂಲಕ ಅಥರ್ವ ತೈಡೆ ವಿಕೆಟ್ ಕಬಳಿಸಿದರು. ನಾಲ್ಕನೇ ಓವರ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರನ್ನು ಸಿರಾಜ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಈ ಎರಡೂ ವಿಕೆಟ್‌ಗಳು ಯುಡಿಆರ್‌ಎಸ್‌ ತೀರ್ಪಿನಲ್ಲಿ ಪರಿಶೀಲನೆಗೊಂಡವು. ಸ್ಪಿನ್ನರ್ ವಣಿಂದು ಹಸರಂಗಾ ಅವರು ಮ್ಯಾಥ್ಯೂ ಶಾರ್ಟ್ ಹಾಗೂ ಶಾರೂಕ್ ಖಾನ್ ವಿಕೆಟ್‌ಗಳನ್ನು ಗಳಿಸಿ ಪಂಜಾಬ್ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಈ ನಡುವೆ ಮಿಂಚಿದ ಪ್ರಭಸಿಮ್ರನ್ ಸಿಂಗ್ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರು. ಆದರೆ ತಂಡದ ಮೊತ್ತ ನೂರರ ಗಡಿ ಮುಟ್ಟುವ ಮುನ್ನವೇ ಅವರನ್ನು ವೇಯ್ನ್ ಪಾರ್ನೆಲ್ ಬೌಲ್ಡ್ ಮಾಡಿದರು. ಈ ಒತ್ತಡದಲ್ಲಿಯೂ ಜಿತೇಶ್ ದಿಟ್ಟ ಹೋರಾಟ ಮಾಡಿದರು. ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಹೊಡೆದರು. ಅವರ ಆಟದಿಂದಾಗಿ ಪಂಜಾಬ್‌ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. 17ನೇ ಓವರ್‌ನಲ್ಲಿ ಜಿತೇಶ್ ಅವರ ಕ್ಯಾಚ್ ಅನ್ನು ಡೀಪ್ ಮಿಡ್‌ವಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಕೈಚೆಲ್ಲಿದರು. ಆದರೆ ಇದರ ಲಾಭ ಪಂಜಾಬ್ ತಂಡಕ್ಕೆ ದಕ್ಕಲು ಸಿರಾಜ್ ಬಿಡಲಿಲ್ಲ. ಅವರು 18ನೇ ಓವರ್‌ನ ಮೂರನೇ ಎಸೆತದಲ್ಲಿ ಹರಪ್ರೀತ್ (13) ಹಾಗೂ ಕೊನೆ ಎಸೆತದಲ್ಲಿ ನೇಥನ್ ಎಲಿಸ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಕನ್ನಡಿಗ ವೈಶಾಖ ವಿಜಯಕುಮಾರ್ ಅವರಿಗೆ ಈ ಪಂದ್ಯದಲ್ಲಿ ವಿಕೆಟ್ ಲಭಿಸಲಿಲ್ಲ. ಕೊಹ್ಲಿ 48ನೇ ಅರ್ಧಶತಕ: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 48ನೇ ಅರ್ಧಶತಕ ದಾಖಲಿಸಿದರು. ಈ ಟೂರ್ನಿಯಲ್ಲಿ ಅವರು ನಾಲ್ಕನೇ ಸಲ ಐವತ್ತರ ಗಡಿ ದಾಟಿದರು. ಫಫ್‌ ಅವರಿಗೆ ಇದು ಈ ಟೂರ್ನಿಯ ಮೂರನೇ ಅರ್ಧಶತಕ. ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 16 ಓವರ್‌ಗಳನ್ನು ಆಡಿದರು. 𝘽𝙖𝙘𝙠 𝙩𝙤 𝙬𝙞𝙣𝙣𝙞𝙣𝙜 𝙬𝙖𝙮𝙨 😎@ 24- # 🙌🙌 ▶️ ://./CQekZNsh7b# | # ../RGFwXXz5eC - , @ 🔝 # # 🔥🔥 🔽 ../3mtS27GqXA ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.