ಮತ್ತೊಂದು ಜಯದತ್ತ ಧೋನಿ ಬಳಗದ ಚಿತ್ತ ಚೆನ್ನೈ: ಗಾಯದಿಂದ ಚೇತರಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಇದರಿಂದಾಗಿ ಚೆನ್ನೈ ಬಳಗದಲ್ಲಿ ಆತ್ಮವಿಶ್ವಾಸ ವೃದ್ಧಿಸಿದೆ. ಉಂಗುಷ್ಠದ ಗಾಯದಿಂದಾಗಿ ಅವರು ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ. ಬುಧವಾರ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಇದರಿಂದಾಗಿ ಅವರು ಫಿಟ್ ಆಗಿರುವ ವಿಶ್ವಾಸ ಮೂಡಿದೆ. ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಜಯಸಿತ್ತು. ತಂಡದ ಆರಂಭಿಕ ಜೋಡಿ ಡೇವೊನ್ ಕಾನ್ವೆ ಹಾಗೂ ರುತುರಾಜ್ ಗಾಯಕವಾಡ್ ಉತ್ತಮ ಲಯದಲ್ಲಿದ್ದಾರೆ. ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಮತ್ತು ಮುಂಬೈನ ಬ್ಯಾಟರ್ ಶಿವಂ ದುಬೆ ಅವರ ಅಬ್ಬರದ ಆಟವೂ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಅಂಬಟಿ ರಾಯುಡು, ಮೋಯಿನ್ ಅಲಿ, ಧೋನಿ ಮತ್ತು ರವೀಂದ್ರ ಜಡೇಜ ಅವರು ಕೊನೆಯ ಹಂತದ ಓವರ್‌ಗಳಲ್ಲಿ ತಂಡದ ಮೊತ್ತಕ್ಕೆ ಒಂದಿಷ್ಟು ರನ್‌ಗಳ ಕಾಣಿಕೆ ನೀಡುವ ಸಮರ್ಥರು. ಆದರೆ ಚೆನ್ನೈಗೆ ಚಿಂತೆ ಇರುವುದು ಬೌಲಿಂಗ್‌ ವಿಭಾಗದಲ್ಲಿ ಮಾತ್ರ. ಹೆಚ್ಚು ವೈಡ್‌ಗಳನ್ನು ಹಾಕುತ್ತಿರುವ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್ ನಿರ್ವಹಿಸುವ ಸವಾಲು ಇದೆ. ಫೀಲ್ಡಿಂಗ್‌ನಲ್ಲಿಯೂ ಸುಧಾರಣೆ ಕಂಡುಕೊಂಡರೆ ತಂಡಕ್ಕೆ ಗೆಲುವಿನ ಹಾದಿ ಸುಗಮವಾಗಬಹುದು. ಅದೇ ಹೈದರಾಬಾದ್ ತಂಡವು ಈಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಪರಾಭವಗೊಂಡಿತ್ತು. ತಂಡವು ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಜಯಿಸಿದೆ. ಇದರಿಂದಾಗಿ ಉಳಿದ ಪಂದ್ಯಗಳಲ್ಲಿ ಜಯ ಸಾಧಿಸುವುದು ಮುಖ್ಯವಾಗಿದೆ. ಆದ್ದರಿಂದ ಏಡನ್ ಮರ್ಕರಂ ಬಳಗವು ದಿಟ್ಟ ಹೋರಾಟ ತೋರುವ ನಿರೀಕ್ಷೆ ಇದೆ. ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ ವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ತಂಡದ ಹೋರಾಟಕ್ಕೆ ಬಲ ಬರುಬಹುದು. ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಹಾಗೂ ಟಿ ನಟರಾಜನ್ ಅವರ ಮುಂದೆ ಚೆನ್ನೈನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನೆಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.