‘ಶತಕಗಳ ಶತಕ’ ಸರದಾರ ಸಚಿನ್ ತೆಂಡೂಲ್ಕರ್ ಅರ್ಧ ಶತಕ ಬೆಂಗಳೂರು: ಸುನೀಲ್ ಗಾವಸ್ಕರ್ ಮತ್ತು ಕಪಿಲ್ ದೇವ್ ಅವರ ನಂತರ ಭಾರತ ಕ್ರಿಕೆಟ್‌ ತಂಡದ ತಾರೆಯಾಗುವ ಆಟಗಾರ ಯಾರು ಎಂಬ ಪ್ರಶ್ನೆ ಮೂಡಿದ್ದ ಹೊತ್ತಿನಲ್ಲಿ ಉದಯಿಸಿದವರು ಸಚಿನ್ ತೆಂಡೂಲ್ಕರ್. 16ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸಚಿನ್ ಕ್ರಿಕೆಟ್‌ ಲೋಕದ ಚಾಂಪಿಯನ್ ಬ್ಯಾಟರ್ ಆಗಿಯಷ್ಟೇ ಬೆಳೆಯಲಿಲ್ಲ. ಕೋಟಿ ಕೋಟಿ ಅಭಿಮಾನಿಗಳ ಹೃದಯಬಡಿತದಲ್ಲಿ ಇದ್ದಾರೆ. ಕ್ರಿಕೆಟ್‌ಪ್ರಿಯರಿಂದ ‘ದೇವರ’ ಪಟ್ಟವೂ ಲಭಿಸಿತು. 24 ವರ್ಷ ಆಡಿದ ಸಚಿನ್ ಒಂದು ಯುಗವನ್ನೇ ಸೃಷ್ಟಿಸಿದರು. ಇದೀಗ 50ನೇ ವಸಂತ ಪೂರೈಸಿದ್ದಾರೆ. 1983ರಲ್ಲಿ ಕಪಿಲ್ ದೇವ್ ಬಳಗವು ವಿಶ್ವಕಪ್ ಜಯಿಸಿ ಭಾರತದ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿತು. ಸಚಿನ್ ತಮ್ಮ ಆಟ ಹಾಗೂ ವ್ಯಕ್ತಿತ್ವದ ಮೂಲಕ ಭಾರತದ ಕ್ರಿಕೆಟ್‌ ಕ್ಷೇತ್ರವನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ದರು. ಅವರು ಆಡಿದ ಕಾಲಘಟ್ಟದಲ್ಲಿ ಅಪಾರ ಪೈಪೋಟಿಯನ್ನೂ ಎದುರಿಸಿದರು. ಆ ಒತ್ತಡವನ್ನು ಗೆದ್ದು ದಂತಕಥೆಯಾದರು. ಆರು ಏಕದಿನ ವಿಶ್ವಕಪ್‌ಗಳಲ್ಲಿ ಆಡಿದರು. 2011ರಲ್ಲಿ ವಿಶ್ವಕಪ್ ಜಯಿಸಿದ ಮಹೇಂದ್ರಸಿಂಗ್ ಧೋನಿ ಪಡೆಯು ಸಚಿನ್‌ಗೆ ಸಮರ್ಪಿಸಿತು. ಸಚಿನ್ ವೃತ್ತಿಜೀವನದಲ್ಲಿ ಒಂದು ವೈಶಿಷ್ಟ್ಯವಿದೆ. ಅದೇನೆಂದರೆ ಅವರು ತಮ್ಮ ಆಟವನ್ನು ನೋಡುತ್ತ ಬೆಳೆದ ಹುಡುಗರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡವರು. ಅಷ್ಟೇ ಅಲ್ಲ. ರಾಂಚಿಯ ತಮ್ಮ ಮನೆಯ ಕೋಣೆಯಲ್ಲಿ ಸಚಿನ್‌ ಚಿತ್ರ ಅಂಟಿಸಿಕೊಂಡು ಅಭಿಮಾನಿಯಾಗಿದ್ದ ಮಹೇಂದ್ರಸಿಂಗ್ ಧೋನಿಯ ನಾಯಕತ್ವದಲ್ಲಿಯೂ ಸಚಿನ್ ಆಡಿದರು. ತಮ್ಮ ಅನುಭವವನ್ನು ಯುವ ಅಟಗಾರರಿಗೆ ಧಾರೆಯೆರೆದರು. ಅವರನ್ನೇ ಅನುಸರಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈಗಲೂ ಭಾರತ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಒಂದು ಕಾಲದಲ್ಲಿ ಅಸಾಧ್ಯವೇ ಎನಿಸಿದ್ದ ದಾಖಲೆಗಳ ರಾಶಿಯನ್ನೇ ಪೇರಿಸಿದರು. ಟೆಸ್ಟ್ ಹಾಗೂ ಏಕದಿನ ಮಾದರಿ ಕ್ರಿಕೆಟ್‌ ಮಾದರಿಗಳಲ್ಲಿ ಅವರ ಶತಕಗಳ ಶತಕದ ದಾಖಲೆಯನ್ನು ಮೀರಿ ನಿಲ್ಲುವವರು ಸಾಗಿಸಬೇಕಾದ ದಾರಿ ಇನ್ನೂ ದೂರವಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟಮೊದಳ ದ್ವಿಶತಕದ ದಾಖಲೆ ಮಾಡಿದವರೂ ಸಚಿನ್ ಅವರೇ. 2010ರಲ್ಲಿ ಅವರು ಗ್ವಾಲಿಯರ್‌ನಲ್ಲಿ ಈ ಸಾಧನೆ ಮಾಡಿದ ನಂತರ ಈ ಮಾದರಿಯಲ್ಲಿ ಎಂಟು ದ್ವಿಶತಕಗಳು ದಾಖಲಾಗಿವೆ. ‌ ‘ಸಚಿನ್ ಮೇಲೆ ಆಗ ಇದ್ದ ಒತ್ತಡ ಅಪಾರವಾದದ್ದು. ಅವರ ಬ್ಯಾಟಿಂಗ್ ನೋಡಲೆಂದೇ ಕ್ರೀಡಾಂಗಣಕ್ಕೆ ಜನರು ಬರುತ್ತಿದ್ದರು. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದಿರಲು ಸಚಿನ್ ಬಹಳಷ್ಟು ಶ್ರಮಪಡುತ್ತಿದ್ದರು. ಆದರೂ ಅವರು ಕೂಡ ಮನುಷ್ಯರೇ ಅಲ್ಲವೇ? ಕೆಲವೊಮ್ಮೆ ವಿಫಲರಾಗುತ್ತಿದ್ದರು. ಮತ್ತೆ ಶ್ರಮಪಟ್ಟು ಪುಟಿದೇಳುತ್ತಿದ್ದರು. ಅದಕ್ಕಾಗಿಯೇ ಅವರು ನಂಬರ್ ಒನ್’ ಎಂದು ಸಚಿನ್ ಜೊತೆ ಆಡಿದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಹೇಳುತ್ತಾರೆ. ಮುಂಬೈನ ಶಾರದಾಶ್ರಮ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಸಚಿನ್ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದರು. 2013–14ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರವೂ ಅವರ ಜನಪ್ರಿಯತೆ ಕುಂದಿಲ್ಲ. ಅವರು ಇವತ್ತಿಗೂ ಅಭಿಮಾನಿಗಳ ಕಣ್ಮಣಿಯಾಗಿಯೇ ಇದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಯಶಸ್ಸಿನಲ್ಲಿ ಅವರ ಮಾರ್ಗದರ್ಶನದ ಪಾತ್ರವೂ ಇದೆ. ಇತ್ತೀಚೆಗಷ್ಟೇ ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಪದಾರ್ಪಣೆ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.