: ಮ್ಯಾಕ್ಸ್‌ವೆಲ್ ಅಬ್ಬರ; ಬೆಂಗಳೂರಿಗೆ ಜಯದ ಹಾರ ಬೆಂಗಳೂರು: ಭಾನುವಾರ ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತುಂಬಿದ್ದ ಅಭಿಮಾನಿಗಳಿಗೆ ‘ಹಸಿರು ಪೋಷಾಕು’ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ರೋಚಕ ಜಯದ ರಸದೌತಣ ನೀಡಿದರು. ಮತ್ತೊಮ್ಮೆ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ (77; 44ಎ, 4X6, 6X4) ಮತ್ತು ಫಫ್ ಡುಪ್ಲೆಸಿ (62;39ಎ, 4X8, 6X2) ಅವರ 127 ರನ್‌ಗಳ ಜೊತೆಯಾಟವು ವ್ಯರ್ಥವಾಗದಂತೆ ಮಧ್ಯಮವೇಗಿ ಹರ್ಷಲ್ ಪಟೇಲ್ ಹೊಣೆ ನಿಭಾಯಿಸಿದರು. ಇದರಿಂದಾಗಿ ಕೊನೆಯ ಓವರ್‌ನವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬೆಂಗಳೂರು ತಂಡವು 7 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಿಸಲು ಕಾರಣರಾದರು. ಟಾಸ್ ಗೆದ್ದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 189 ರನ್ ಗಳಿಸಿತು. ಅದಕ್ಕುತ್ತರವಾಗಿ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 182 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವು ಮೊದಲ ಎಸೆತದಿಂದ ಕೊನೆಯವರೆಗೂ ಹಲವು ನಾಟಕೀಯ ತಿರುವುಗಳಿದ್ದವು. ಪ್ರವಾಸಿ ಬಳಗದ ವೇಗಿ ಟ್ರೆಂಟ್ ಬೌಲ್ಟ್ ಹಾಕಿದ ಮೊದಲ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇಡೀ ಕ್ರೀಡಾಂಗಣವೇ ಸ್ತಬ್ಧವಾಗಿಹೋಯಿತು. ಈ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ವಿರಾಟ್ ‘ಶೂನ್ಯ’ದೊಂದಿಗೆ ಡಗ್‌ಔಟ್‌ನತ್ತ ಸಾಗಿದರು. ಕ್ರೀಸ್‌ಗೆ ಬಂದ ಶಾಬಾಜ್ ಅಹಮದ್ ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ. ಅವರೂ ಟ್ರೆಂಟ್‌ಬೌಲ್ಟ್‌ಗೆ ಶರಣಾದರು. ಇನ್ನೊಂದು ಬದಿಯಲ್ಲಿ ಫಫ್ ಡುಪ್ಲೆಸಿ ಮಾತ್ರ ಸಮಚಿತ್ತದೊಂದಿಗೆ ಇದ್ದರು. ಅವರನ್ನು ಸೇರಿಕೊಂಡ ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ 35 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಬಾಡಿಹೋಗಿದ್ದ ಮುಖಗಳಲ್ಲಿ ನಗು ಅರಳಿಸಿದರು. ಗ್ಯಾಲರಿಗಳಲ್ಲಿ ಸಂತಸದ ‘ಹೊನಲು’ ಹರಿಯುವಂತೆ ಮಾಡಿದರು. ಮ್ಯಾಕ್ಸ್‌ವೆಲ್ ಪ್ರಯೋಗಿಸಿದ ರಿವರ್ಸ್ ಸ್ವೀಪ್‌ಗಳು, ಡ್ರೈವ್‌ ಮತ್ತು ನೇರ ಹೊಡೆಗಳಿಗೆ ಬೌಲರ್‌ಗಳು ಬಸವಳಿದರು. ಇನ್ನೊಂದು ಕಡೆ ಫಫ್ ತಮ್ಮ ಆಟಕ್ಕೆ ಕೊಂಚ ಕಡಿವಾಣ ಹಾಕಿ ಮ್ಯಾಕ್ಸ್‌ವೆಲ್‌ಗೆ ಹೆಚ್ಚು ಅವಕಾಶ ಬಿಟ್ಟುಕೊಟ್ಟರು. 27 ಎಸೆತಗಳಲ್ಲಿ ಅರ್ಧಶತಕ ಹೊಡೆದ ಮ್ಯಾಕ್ಸ್‌ವೆಲ್ ಅಬ್ಬರ ಮುಂದುವರಿಯಿತು. ತಂಡವು ಕೇವಲ ಹತ್ತು ಓವರ್‌ಗಳಲ್ಲಿಯೇ ಶತಕದ ಗಡಿ ಮುಟ್ಟಿತು. ಡುಪ್ಲೆಸಿ ಈ ಟೂರ್ನಿಯಲ್ಲಿ ತಮ್ಮ ಐದನೇ ಅರ್ಧಶತಕವನ್ನು ಫೂರೈಸಿದರು. 14ನೇ ಓವರ್‌ನಲ್ಲಿ ಫೀಲ್ಡರ್ ಯಶಸ್ವಿ ಜೈಸ್ವಾಲ್ ಚುರುಕಾದ ಫೀಲ್ಡಿಂಗ್ ಮತ್ತು ಥ್ರೋ ಮಾಡುವ ಮೂಲಕ ಡುಪ್ಲೆಸಿ ರನ್‌ಔಟ್ ಆಗಲು ಕಾರಣರಾದರು. ನಂತರದ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಪ್ರಯೋಗಿಸಿದ ಮ್ಯಾಕ್ಸ್‌ವೆಲ್ ಅವರು ಜೇಸನ್ ಹೋಲ್ಡರ್‌ಗೆ ಸುಲಭದ ಕ್ಯಾಚ್ ಆದರು. ಇದರೊಂದಿಗೆ ಆರ್‌ಸಿಬಿಯ ಇನ್ನೂರಕ್ಕಿಂತ ಹೆಚ್ಚು ರನ್‌ಗಳ ಮೊತ್ತ ಗಳಿಸುವ ಅವಕಾಶವೂ ಮುಗಿಯಿತು. ಹೋದ ಟೂರ್ನಿಯಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಸಹಿತ ಐವರು ಬ್ಯಾಟರ್‌ಗಳು ಕೇವಲ 28 ರನ್‌ಗಳ ಅಂತರದಲ್ಲಿ ಪತನವಾದವು. ಆದರೂ ತಂಡವು ಹೋರಾಟದ ಮೊತ್ತ ಗಳಿಸಿತು. ತವರಿನಲ್ಲಿ ದೇವದತ್ತ ಅರ್ಧಶತಕ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್ (52; 34ಎ) ತಮ್ಮ ತವರಿನಂಗಳದಲ್ಲಿ ಅರ್ಧಶತಕ ಗಳಿಸಿದರು. ರಾಯಲ್ಸ್ ತಂಡದ ’ರನ್ ಯಂತ್ರ‘ ಜೋಸ್ ಬಟ್ಲರ್ ಮೊದಲ ಓವರ್‌ನಲ್ಲಿಯೇ ತಮ್ಮ ಖಾತೆ ತೆರೆಯುವ ಮುನ್ನ ಸಿರಾಜ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಆಗ ಕ್ರೀಸ್‌ಗೆ ಬಂದ ದೇವದತ್ತ ಅವರು ಯಶಸ್ವಿ ಜೈಸ್ವಾಲ್ (47 ರನ್) ಜೊತೆಗೆ ಇನಿಂಗ್ಸ್‌ಗೆ ಬಲ ತುಂಬಿದರು. ಜೈಸ್ವಾಲ್‌ಗಿಂತಲೂ ವೇಗವಾಗಿ ರನ್‌ ಗಳಿಸಿದರು. 30 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಅದರಲ್ಲಿ ಒಂದು ಸಿಕ್ಸರ್, ಏಳು ಬೌಂಡರಿಗಳಿದ್ದವು. ಇಬ್ಬರೂ ಎಡಗೈ ಬ್ಯಾಟರ್‌ಗಳು ಎರಡನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ ಸೇರಿಸಿದರು. ಹರ್ಷಲ್ ಮಿಂಚು: ಫಫ್ ಬದಲಿಗೆ ಇಂಪ್ಯಾಕ್ಟ್‌ ಪ್ಲೆಯರ್ ಆಗಿ ಕಣಕ್ಕಿಳಿದ ಹರ್ಷಲ್ ಪಟೇಲ್ ಅವರು ಮೂರು ವಿಕೆಟ್ ಗಳಿಸಿದರು. ದೇವದತ್ತ ಮತ್ತು ಜೈಸ್ವಾಲ್ ಅವರು ಔಟಾದ ನಂತರ ತಂಡದ ಇನಿಂಗ್ಸ್‌ಗೆ ಆಸರೆಯಾಗುವ ಭರವಸೆ ಮೂಡಿಸಿದ್ದ ಸಂಜು ಸ್ಯಾಮ್ಸನ್ ವಿಕೆಟ್ ಕಬಳಿಸಿದರು. ಕೊನೆಯ ಓವರ್‌ನಲ್ಲಿ ರಾಜಸ್ಥಾನ ಜಯಕ್ಕೆ 21 ರನ್‌ಗಳ ಅಗತ್ಯವಿತ್ತು. ಇದರಲ್ಲಿ ಕೇವಲ 12 ರನ್‌ಗಳನ್ನು ಬಿಟ್ಟುಕೊಟ್ಟ ಅವರು ಆರ್. ಅಶ್ವಿನ್ ವಿಕೆಟ್ ಕೂಡ ಗಳಿಸಿ ಆರ್‌ಸಿಬಿಯ ಹರ್ಷಕ್ಕೆ ಕಾರಣರಾದರು. ರಾಜಸ್ಥಾನದ ಧ್ರುವ ಜುರೇಲ್ ಆಟಕ್ಕೆ (ಔಟಾಗದೆ 34) ಜಯದ ಫಲ ಒಲಿಯಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.