ಕ್ರಿಕೆಟ್ ದಾಖಲೆಗಳನ್ನೂ ಮೀರಿದ ಶ್ರೇಷ್ಠ ವ್ಯಕ್ತಿತ್ವ: ಸಚಿನ್ ಕುರಿತು ಮಾರ್ಕಸ್ ಕುಟೊ ಬೆಂಗಳೂರು: ‘ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮೀರಿ ನಿಲ್ಲುವ ಆಟಗಾರರು ಬರಬಹುದು. ಅವರಿಗಿಂತ ಹೆಚ್ಚು ಹೆಸರು, ಹಣ ಗಳಿಸುವ ಕ್ರಿಕೆಟಿಗರೂ ಭವಿಷ್ಯದಲ್ಲಿ ಬೆಳೆಯಬಹುದು. ಆದರೆ, ಸಚಿನ್ ಮೇರು ವ್ಯಕ್ತಿತ್ವಕ್ಕೆ ಸಾಟಿಯಾಗುವವರು ಮತ್ತೊಬ್ಬರಿಲ್ಲ’– ಸೋಮವಾರ 50ನೇ ಜನ್ಮದಿನ ಆಚರಿಸಿಕೊಂಡ ಸಚಿನ್ ಕುಟುಂಬದ ಸ್ನೇಹಿತ ಹಾಗೂ ಬಿಸಿಸಿಐ ಆಂಪೈರ್ ಮಾರ್ಕಸ್ ಕುಟೊ ಅವರ ಮಾತುಗಳಿವು. ಮಾರ್ಕಸ್ ಅವರ ತಮ್ಮ ರಿಕಿ ಕುಟೊ ಅವರು ಸಚಿನ್ ಮತ್ತು ವಿನೋದ್ ಕಾಂಬ್ಳಿಯೊಂದಿಗೆ ಬಾಲ್ಯದಲ್ಲಿ ಕ್ರಿಕೆಟ್‌ ಆಡಿದವರು. ಮೂವರೂ ರಮಾಕಾಂತ್ ಆಚ್ರೇಕರ್ ಅವರ ಶಿಷ್ಯಂದಿರು. ಶಿವಾಜಿ ಪಾರ್ಕ್‌ನಲ್ಲಿ ಮೂವರು ಅಭ್ಯಾಸ ಮಾಡುತ್ತಿದ್ದರು. ರಿಕಿ ಮೂಲಕ ಸಚಿನ್ ಅವರು ಮಾರ್ಕಸ್‌ ಮತ್ತು ಕುಟುಂಬದೊಂದಿಗೆ ಒಡನಾಟ ಬೆಳೆಸಿಕೊಂಡರು. 1988ರಲ್ಲಿ ಹ್ಯಾರಿಸ್ ಶೀಲ್ಡ್ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಶಾರದಾಶ್ರಮ ವಿದ್ಯಾಮಂದಿರ ಶಾಲೆ ತಂಡದಲ್ಲಿದ್ದ ಸಚಿನ್ ಮತ್ತು ವಿನೋದ್ ಕಾಂಬ್ಳಿ 664 ರನ್‌ಗಳ ಜೊತೆಯಾಟವಾಡಿದ್ದರು. ಆ ಸಾಧನೆಯು ವಿಶ್ವದಾಖಲೆಯ ಪುಟ ಸೇರಲು ಮಾರ್ಕಸ್ ಕುಟೊ ಅವರ ಪಾತ್ರವೇ ಮಹತ್ವದ್ದು. ಆ ದಾಖಲೆಯಿಂದಾಗಿಯೇ ಸಚಿನ್ ಜೀವನದ ದಿಕ್ಕು ಬದಲಾಯಿತು. ಆ ಘಟನೆಯ ಬಗ್ಗೆ 62 ವರ್ಷದ ಮಾರ್ಕಸ್ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ‘ನಾನು ಆಗ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಆ ಪಂದ್ಯದಲ್ಲಿ ಸಚಿನ್, ವಿನೋದ್ ಇದ್ದ ತಂಡದಲ್ಲಿ ನನ್ನ ಸಹೋದರನೂ ಇದ್ದ. ರಿಕಿಯನ್ನು ನಾನೇ ಮೈದಾನಕ್ಕೆ ಬಿಟ್ಟು ನಾನು ಕಚೇರಿಗೆ ತೆರಳಿದೆ. ಒಂದಷ್ಟು ಹೊತ್ತು ಕೆಲಸ ಮಾಡಿ ಊಟದ ಹೊತ್ತಿಗೆ ಮೈದಾನಕ್ಕೆ ಮರಳಿದೆ. ಅಮೋಲ್ ಮಜುಂದಾರ್ ಪ್ಯಾಡ್ ಕಟ್ಟಿಕೊಂಡು ತಮ್ಮ ಬ್ಯಾಟಿಂಗ್ ಸರದಿಗಾಗಿ ಕಾಯುತ್ತಿದ್ದರು. ಮತ್ತೆ ಕಚೇರಿಗೆ ಮರಳಿದೆ. ಚಹಾ ವಿರಾಮಕ್ಕೆ ಬಂದಾಗಲೂ ಇದೇ ದೃಶ್ಯ ಇತ್ತು. ಸಚಿನ್, ವಿನೋದ್ ಆಡುತ್ತಲೇ ಇದ್ದರು. ಪಂದ್ಯದ ಎರಡನೇ ದಿನವೂ ಅವರ ಆಟ ಮುಂದುವರಿಯಿತು. ನಾನು ಮೈದಾನಕ್ಕೆ ಕಾಲಿಟ್ಟಾಗ ಅಮೋಲ್ ಪ್ಯಾಡ್ ಬಿಚ್ಚಿಟ್ಟು ಅರಾಮಾಗಿ ಕುಳಿತಿದ್ದ. ಏನಾಯಿತು ಎಂದು ಕೇಳಿದ್ದಕ್ಕೆ ಬ್ಯಾಟಿಂಗ್ ನೋಡುತ್ತ ಎಂಜಾಯ್ ಮಾಡ್ತಿದ್ದೇನೆ ಎಂದಿದ್ದ ಅಮೋಲ್. ಸಚಿನ್ ಮತ್ತು ಕಾಂಬ್ಳಿ ತಲಾ ಒಂದು ತ್ರಿಶತಕ ಗಳಿಸಿ ಆಡುತ್ತಿದ್ದರು. ವಿರಾಮದಲ್ಲಿ ಇಬ್ಬರೂ ಸರ್ (ರಮಾಕಾಂತ್) ಜೊತೆ ಮಾತನಾಡಲು ಫೋನ್ ಬೂತ್‌ಗೆ ಓಡಿದರು. ಆದರೆ ಅತ್ತಣಿಂದ ರಮಾಕಾಂತ್ ಸರ್, ಇನ್ನೂ ಬ್ಯಾಟಿಂಗ್ ಮಾಡ್ತಾ ಇದ್ದೀರಾ? ಬುದ್ಧಿ ಇಲ್ವಾ? ಹೋಗಿ ಮೊದ್ಲು ಡಿಕ್ಲೇರ್ ಮಾಡಿ ಎಂದು ಗದರಿದ್ದರು. ಇನ್ನಷ್ಟು ರನ್‌ ಗಳಿಸುವ ಆಸೆಯಲ್ಲಿದ್ದ ಹುಡುಗರ ಮುಖದಲ್ಲಿ ನಿರಾಶೆ ತುಂಬಿಕೊಂಡಿತ್ತು. ಭಾರವಾದ ಹೆಜ್ಜೆ ಹಾಕುತ್ತ ಹೋಗಿ ತಂಡ ಸೇರಿಕೊಂಡು ಡಿಕ್ಲೇರ್‌ ಘೋಷಿಸಿದರು. ಆ ಸಂದರ್ಭದಲ್ಲಿ ನಮಗೆ ಇದು ದಾಖಲೆ ಎನಿಸಿರಲಿಲ್ಲ’ ಎಂದು ಮಾರ್ಕಸ್ ನೆನಪಿಸಿಕೊಂಡರು. ಇದರ ನಂತರ ಕುಟೊ ಅವರು ಮೋಹನದಾಸ್, ಆನಂದ್ ಸೇರಿದಂತೆ ಹಲವು ಅಂಕಿ ಸಂಖ್ಯೆ ತಜ್ಞರು, ಕ್ರೀಡಾ ಪತ್ರಕರ್ತರನ್ನು ಸಂಪರ್ಕಿಸಿ ಈ ದಾಖಲೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕಡೆಗೂ ಇದೊಂದು ದಾಖಲೆ ಎಂದು ಗೊತ್ತಾಯಿತು. ವಿಸ್ಡನ್ ನಿಯತಕಾಲಿಕೆಯಲ್ಲಿ ಸಣ್ಣ ಸುದ್ದಿ ಪ್ರಕಟವಾಯಿತು. ಸ್ಥಳೀಯ ಪತ್ರಿಕೆಳೂ ಬರೆದವು. ಇದರಿಂದ ಸಚಿನ್ ಮತ್ತು ವಿನೋದ್ ಅವರತ್ತ ಜನರ ಗಮನ ಹರಿಯಿತು. ಅದಕ್ಕೆ ತಕ್ಕಂತೆ ಶಾರದಾಶ್ರಮ ತಂಡವು ಸಚಿನ್ ಮತ್ತು ಕಾಂಬ್ಳಿಯ ನಿರಂತರ ಉತ್ತಮ ಆಟದಿಂದಾಗಿ ಎಲ್ಲ ಟೂರ್ನಿಗಳಲ್ಲಿಯೂ ಚಾಂಪಿಯನ್ ಆಗಿ ಇತಿಹಾಸ ಬರೆಯಿತು. ‘ಸಚಿನ್ ಓದಿನಲ್ಲಿ ಸಾಧಾರಣವಾಗಿದ್ದರೂ ಶಿಸ್ತು ಇತ್ತು. ಆದರೆ ಛಲ ಎನ್ನುವುದು ರಕ್ತಗತವಾಗಿತ್ತು. ಯಾರಾದರೂ ಚುಡಾಯಿಸಿದರೆ, ಬೆರಳು ತೋರಿಸಿದರೆ ಅವರಿಗೆ ತಕ್ಕ ಉತ್ತರ ಕೊಡದೇ ಬಿಡುತ್ತಿರಲಿಲ್ಲ. ಈ ಗುಣ ಅವರ ವೃತ್ತಿಜೀವನದಲ್ಲಿಯೂ ಮುಂದುವರಿಯಿತು. ತಮ್ಮನ್ನು ಕಿಚಾಯಿಸಿದ ಬೌಲರ್‌ಗಳಿಗೆ ಬ್ಯಾಟಿಂಗ್ ಮೂಲಕ ಅವರು ಉತ್ತರ ಕೊಡುತ್ತಿದ್ದರು. ಇನ್ನು ತನ್ನ ಆಪ್ತ ವಲಯದ ಗೆಳೆಯರ ಕಾಲೆಳೆಯುವುದರಲ್ಲಿಯೂ ನಿಸ್ಸೀಮರಾಗಿದ್ದರು’ ಎಂದು ಕುಟೊ ನೆನಪಿಸಿಕೊಳ್ಳುತ್ತಾರೆ. ‘ಸಚಿನ್ ಆವರನ್ನು ಏಕವಚನದಲ್ಲಿ ಕರೆಯುತ್ತಿದ್ದೆ. ಅವರು ತಾರೆಯಾಗಿ ಬೆಳೆದ ಮೇಲೆ ಬಹುವಚನದಲ್ಲಿ ಕರೆಯಲು ಆರಂಭಿಸಿದೆ. ಅದಕ್ಕೆ ಅವರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ ಮೊದಲಿನಂತೆಯೇ ಏಕವಚನದಲ್ಲಿ ಕರೀರಿ ಎಂದಿದ್ದು ಇದೆ. ನಮ್ಮ ಸಂಭಾಷಣೆಗಳು ಏನಿದ್ದರೂ ಮರಾಠಿಯಲ್ಲಿಯೇ ಹೆಚ್ಚು. ವಿಜಯ್ ಹಜಾರೆ, ಸುನಿಲ್ ಗಾವಸ್ಕರ್ ಅವರೊಂದಿಗೆ ನಾನು ಒಡನಾಡಿದ್ದೇನೆ. ಅವರು ತಮ್ಮ ಸರಳತೆಯಿಂದ ನಿವೃತ್ತಿಯ ನಂತರವೂ ಗೌರವ ಉಳಿಸಿಕೊಂಡವರು ಅವರು. ಅದೇ ರೀತಿ ಸಚಿನ್ ಕೂಡ ಆಟದಿಂದ ದೂರವುಳಿದ ನಂತರವೂ ಜನಾನುರಾಗಿಯಾಗಿದ್ದಾರೆ. ಅದಕ್ಕೆ ಅವರ ಸರಳತೆಯೇ ಕಾರಣ‘ ಎನ್ನುತ್ತಾರೆ ಮಾರ್ಕಸ್. ‘ಸಚಿನ್ ಪುತ್ರ ಅರ್ಜುನ್ ತಾರಾಪುತ್ರನೆಂಬ ಒತ್ತಡವನ್ನು ನಿಭಾಯಿಸುವುದನ್ನು ಕಲಿತಿದ್ದಾರೆ. ಸಮಚಿತ್ತದೊಂದಿಗೆ ಆಡುತ್ತಿದ್ದಾರೆ. ಅಪ್ಪ ದೊಡ್ಡ ತಾರೆಯಾದಾಗ ಮಕ್ಕಳು ಎದುರಿಸುವ ಒತ್ತಡಗಳು ಬೇರೆಯೆ ತೆರನಾಗಿರುತ್ತದೆ. ಅದು ಅಮಿತಾಭ್ ಬಚ್ಚನ್, ಸುನಿಲ್ ಗಾವಸ್ಕರ್ ಅಥವಾ ಸಚಿನ್ ಆಗಿರಬಹುದು. ಸಮಾಜವು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ಈ ಒತ್ತಡದಲ್ಲಿಯೇ ಸಾಧನೆಯನ್ನು ಮಾಡಬೇಕು’ ಎಂದು ಕುಟೊ ವಿಶ್ಲೇಷಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.