|ಭಾರಿ ಸಂಖ್ಯೆಯ ಪ್ರೇಕ್ಷಕರು ನನ್ನನ್ನು ಬೀಳ್ಕೊಡಲು ಬಯಸಿದ್ದರು– ಧೋನಿ ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್(ಸಿಎಸ್‌ಕೆ) ತಂಡವು ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್‌(ಕೆಕೆಆರ್) ವಿರುದ್ಧ 49 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ರಜಾ ದಿನದಂದು ನಡೆದ ಈ ಪಂದ್ಯ ವೀಕ್ಷಿಸಲು ಭಾರಿ ಸಂಖ್ಯೆಯ ಪ್ರೇಕ್ಷಕರು ನೆರೆದಿದ್ದರು. ಈ ಬಗ್ಗೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯದ ವೇಳೆ ಕೋಲ್ಕತ್ತದ ಪ್ರೇಕ್ಷಕರು ತವರು ತಂಡಕ್ಕೆ ಹುರಿದುಂಬಿಸುವುದಕ್ಕೂ ಹೆಚ್ಚಾಗಿ ಹಳದಿ ಬಣ್ಣದ ಜರ್ಸಿಯಲ್ಲಿ ಸಿಎಸ್‌ಕೆ ಕ್ಯಾಪ್ಟನ್ ಅಲ್ಲದೇ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕರೂ ಆದ ಧೋನಿ ಅವರಿಗೆ ಅಭಿಮಾನ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು. ಧೋನಿ ಅವರು ಬಿಹಾರ ತಂಡದ ಪರ ರಣಜಿ ಟ್ರೋಫಿ ಆಡುವಾಗ ಮೊದಲ ಬಾರಿಗೆ ಈಡನ್ ಗಾರ್ಡನ್‌ ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಧೋನಿಯನ್ನು ಐಪಿಎಲ್‌ನಲ್ಲಿ ಇದೇ ಕೊನೆಯ ಬಾರಿ ಅವರ ಆಟವನ್ನು ಕಣ್ಣುತುಂಬಿಕೊಳ್ಳುತ್ತಿದ್ದೇವೆ ಎಂಬಂತೆ ಬೃಹತ್‌ ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು ಬೆಂಬಲಿಸಿದರು. ‘ದೊಡ್ಡ ಸಂಖ್ಯೆಯಲ್ಲಿ ಸೇರಿದ ಬೆಂಬಲಿಗರಿಗೆ ಧನ್ಯವಾದ ಹೇಳುತ್ತೇನೆ. ಇವರು ಮುಂದಿನ ಪಂದ್ಯದಲ್ಲಿ ಕೆಕೆಆರ್‌ ತಂಡದ ನೇರಳೆ ಜರ್ಸಿಯಲ್ಲಿ ಬರುತ್ತಾರೆ. ಪ್ರೇಕ್ಷಕರ ಅಭಿಮಾನ ನೋಡಿದರೆ ನನ್ನನ್ನು ಬೀಳ್ಕೊಡಲು ಪ್ರಯತ್ನಿಸುತ್ತಿರುವಂತೆ ಅನಿಸುತ್ತಿತ್ತು. ನೆರೆದ ಅಷ್ಟೂ ಪ್ರೇಕ್ಷಕರಿಗೆ ತುಂಬಾ ಥ್ಯಾಂಕ್ಸ್‘ ಎಂದು ಧೋನಿ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.