2023: ಗುಜರಾತ್‌ಗೆ ಮಣಿದ ಮುಂಬೈ ಅಹಮದಾಬಾದ್‌: ಶುಭಮನ್‌ ಗಿಲ್‌ ಅವರ ಅರ್ಧಶತಕ, ಡೇವಿಡ್‌ ಮಿಲ್ಲರ್‌ ಮತ್ತು ಅಭಿನವ್‌ ಮನೋಹರ್‌ ಅವರ ಅಬ್ಬರದ ಆಟದಿಂದ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಜಯ ಒಲಿಯಿತು. ಅಹಮದಾಬಾದ್‌ನಲ್ಲಿ ಮಂಗಳ ವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್ ತಂಡವು 55 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 207 ರನ್‌ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 152 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಹಾರ್ದಿಕ್‌ ಎರಡನೇ ಓವರ್‌ನಲ್ಲಿಯೇ ನಾಯಕ ರೋಹಿತ್‌ ಶರ್ಮಾ (2) ಅವರನ್ನು ಔಟ್‌ ಮಾಡಿ ಮುಂಬೈ ತಂಡಕ್ಕೆ ಆಘಾತ ನೀಡಿದರು. ಇಶಾನ್‌ ಕಿಶನ್ (13) ಹಾಗೂ ಕ್ಯಾಮರಾನ್ ಗ್ರೀನ್‌ (33) ಎರಡನೇ ವಿಕೆಟ್‌ಗೆ 39 ರನ್ ಸೇರಿಸಿದರು. ಇವರಿಬ್ಬರ ವಿಕೆಟ್‌ಗಳು ಕ್ರಮವಾಗಿ ಅಫ್ಗಾನಿಸ್ತಾನದ ಸ್ಪಿನ್ನರ್‌ಗಳಾದ ರಶೀದ್‌ ಖಾನ್‌ (27ಕ್ಕೆ 2) ಹಾಗೂ ನೂರ್ ಅಹಮದ್‌ (37ಕ್ಕೆ 3) ಪಾಲಾದವು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ (23), ನೇಹಲ್ ವಧೇರಾ (40) ಅವರ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ. ಗುಜರಾತ್ ಪರ ಮೋಹಿತ್‌ ಶರ್ಮಾ ಕೂಡ ಎರಡು ವಿಕೆಟ್‌ ಗಳಿಸಿದರು. ಗುಜರಾತ್ ಬ್ಯಾಟರ್‌ಗಳ ಅಬ್ಬರ: ಅಗ್ರ ಕ್ರಮಾಂಕದಲ್ಲಿ ಗಿಲ್‌ (56 ರನ್‌, 34 ಎ.) ಅವರು ಇನಿಂಗ್ಸ್‌ಗೆ ಬಲ ತುಂಬಿದರೆ, ಮಿಲ್ಲರ್‌ (46 ರನ್‌, 22 ಎ.) ಹಾಗೂ ಅಭಿನವ್ (42 ರನ್‌, 21 ಎ.) ಅಂತಿಮ ಓವರ್‌ಗಳಲ್ಲಿ ಬೀಸಾಟ ಆಡಿದರು. ಐದು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳ ನೆರವಿನಿಂದ 20 ರನ್‌ ಗಳಿಸಿದ ರಾಹುಲ್‌ ತೆವಾಟಿಯಾ ಅವರೂ ತಂಡದ ಸ್ಕೋರ್‌ 200ರ ಗಡಿ ದಾಟಲು ನೆರವಾದರು. ಟಾಸ್‌ ಗೆದ್ದ ರೋಹಿತ್‌, ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಅರ್ಜುನ್‌ ತೆಂಡೂಲ್ಕರ್‌, ಮೂರನೇ ಓವರ್‌ನಲ್ಲಿ ವೃದ್ಧಿಮಾನ್‌ ಸಹಾ (4) ವಿಕೆಟ್‌ ಪಡೆದು ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಗಿಲ್‌ ಮತ್ತು ಹಾರ್ದಿಕ್‌ ಎರಡನೇ ವಿಕೆಟ್‌ಗೆ 38 ರನ್‌ ಸೇರಿಸಿದರು. ಹಾರ್ದಿಕ್‌ ವಿಕೆಟ್‌ ಪಡೆದ ಪೀಯೂಷ್‌ ಚಾವ್ಲಾ ಈ ಜತೆಯಾಟ ಮುರಿದರು. ತಂಡದ ಮೊತ್ತ 91 ಆಗಿದ್ದಾಗ ಗಿಲ್‌ ಅವರು ಕುಮಾರ ಕಾರ್ತಿಕೇಯ ಅವರಿಗೆ ವಿಕೆಟ್‌ ಒಪ್ಪಿಸಿದರು. 10 ರನ್‌ ಸೇರಿಸುವಷ್ಟರಲ್ಲಿ ವಿಜಯ್‌ ಶಂಕರ್‌ ಕೂಡಾ ಔಟಾದರು. ಆದರೆ ಮಿಲ್ಲರ್‌ ಮತ್ತು ಅಭಿನವ್ ಅವರು ಜತೆಯಾದ ಬಳಿಕ ಎದುರಾಳಿ ಬೌಲರ್‌ಗಳ ದಿಕ್ಕುತಪ್ಪಿತು. ಬೌಂಡರಿ, ಸಿಕ್ಸರ್‌ಗಳ ಮಳೆಗರೆದ ಇಬ್ಬರೂ ಐದನೇ ವಿಕೆಟ್‌ಗೆ 71 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ಕೊನೆಯ 5 ಓವರ್‌ಗಳಲ್ಲಿ 77 ರನ್‌ಗಳು ಬಂದವು. ಚಾವ್ಲಾ ಅವರ ನಾಲ್ಕನೇ ಓವರ್‌ನಲ್ಲಿ ಅಭಿನವ್ 17 ರನ್‌ ಗಳಿಸಿದರು. ಅಭಿನವ್‌ ಮತ್ತು ಮಿಲ್ಲರ್‌ ಅವರು ಗ್ರೀನ್‌ ಬೌಲ್‌ ಮಾಡಿದ 18ನೇ ಓವರ್‌ನಲ್ಲಿ ಮೂರು ಸಿಕ್ಸರ್‌ಗಳ ನೆರವಿನಿಂದ 22 ರನ್‌ ಸೂರೆಗೈದರು. 34 ರನ್‌ಗಳಿಗೆ ಎರಡು ವಿಕೆಟ್‌ ಪಡೆದ ಚಾವ್ಲಾ, ಯಶಸ್ವಿ ಬೌಲರ್‌ ಎನಿಸಿಕೊಂಡರು. ಪಿಎಲ್‌ನಲ್ಲಿ ಸಹಾ ಅವರಿಗೆ ಇದು 150ನೇ ಹಾಗೂ ಮೊಹಮ್ಮದ್‌ ಶಮಿ ಅವರಿಗೆ 100ನೇ ಪಂದ್ಯ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.