2023: ಆರ್‌ಸಿಬಿಗೆ ಕಠಿಣ ಗುರಿ ನೀಡಿದ ಕೆಕೆಆರ್ ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ವಿರುದ್ಧ ಕಣಕ್ಕಿಳಿದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಬೀಗಿತ್ತು. ಆದರೆ, ಇದಕ್ಕೆ ಬೌಲರ್‌ಗಳು ತಕ್ಕ ಬೆಲೆ ತೆರಬೇಕಾಯಿತು. ಆರ್‌ಸಿಬಿಯ ಸಡಿಲ ಬೌಲಿಂಗ್ ಹಾಗೂ ಕೆಕೆಆರ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳ ಆಕ್ರಮಣಕಾರಿ ಆಟದಿಂದ ಕೆಕೆಆರ್‌ 20 ಓವರ್‌ಗಳಿಗೆ 200 ರನ್ ಕಲೆ ಹಾಕಿತು. ಈ ಪಯಣದಲ್ಲಿ ಕೆಕೆಆರ್ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಕೆಆರ್‌ನ ಜಾಸನ್ ರಾಯ್ 56, ನಾರಾಯಣ್ ಜಗದೀಶನ್ 27, ವೆಂಕಟೇಶ್ ಅಯ್ಯರ್ 31, ನಿತೀಶ್ ರಾಣಾ 48 ಆಂಡ್ರ್ಯೂ ರಸೆಲ್ 1 ರನ್ ಬಾರಿಸಿದರು. ಔಟಾಗದೇ ರಿಂಕು ಸಿಂಗ್ 18, ಡೇವಿಡ್ ವೈಸ್ 12 ರನ್ ಚಚ್ಚಿದರು. ಅರ್‌ಸಿಬಿಯಲ್ಲಿ ಹಸರಂಗ್ ಹಾಗೂ ವಿಜಯ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು. ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು, ಮೂರು ಸೋಲು. ಕೈಯಲ್ಲಿ ಎಂಟು ಪಾಯಿಂಟ್ಸ್‌. ಐಪಿಎಲ್‌ ಟೂರ್ನಿಯ ಲೀಗ್‌ ಹಂತದಲ್ಲಿ ಅರ್ಧ ಹಾದಿ ಕ್ರಮಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಾಧನೆಯಿದು. ಫಫ್‌ ಡುಪ್ಲೆಸಿ ಬಳಗಕ್ಕೆ ಇನ್ನೂ ಏಳು ಪಂದ್ಯಗಳನ್ನು ಆಡಬೇಕಿದೆ. ಆದರೆ ಬುಧವಾರದ ಪಂದ್ಯ ಸೇರಿದಂತೆ ತವರು ಅಂಗಳದಲ್ಲಿ ಆಡಲು ಬಾಕಿಯಿರುವುದು ಎರಡು ಪಂದ್ಯಗಳು ಮಾತ್ರ. ಇತರ ಐದು ಹಣಾಹಣಿಗಳು ‘ಅವೇ’ (ಹೊರಗಡೆ) ಪಂದ್ಯಗಳು ಆಗಿವೆ. ಆದ್ದರಿಂದ ಕೆಕೆಆರ್‌ ತಂಡವನ್ನು ಮಣಿಸಿ ‘ಹ್ಯಾಟ್ರಿಕ್‌’ ಗೆಲುವಿನ ಸಾಧನೆಯೊಂದಿಗೆ ‘ಅವೇ’ ಪಂದ್ಯಗಳಿಗೆ ತೆರಳುವ ಗುರಿಯನ್ನು ಆರ್‌ಸಿಬಿ ಹಾಕಿಕೊಂಡಿದೆ. ಡುಪ್ಲೆಸಿ ಬಳಗ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಏಳು ರನ್‌ಗಳಿಂದ ಮಣಿಸಿತ್ತು. ಬೆಂಗಳೂರಿನ ತಂಡವು ಬ್ಯಾಟಿಂಗ್‌ನಲ್ಲಿ ನಾಯಕ ಡುಪ್ಲೆಸಿ, ವಿರಾಟ್‌ ಕೊಹ್ಲಿ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನೇ ಅತಿಯಾಗಿ ಅವಲಂಬಿಸಿದೆ. ತಂಡದ ನಾಲ್ಕು ಗೆಲುವುಗಳಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಡುಪ್ಲೆಸಿ ಒಟ್ಟು 405 ರನ್‌ ಕಲೆ ಹಾಕಿದ್ದರೆ, ವಿರಾಟ್‌ ಕೊಹ್ಲಿ (279) ಮತ್ತು ಮ್ಯಾಕ್ಸ್‌ವೆಲ್‌ (253) ಅವರೂ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ಧಾರೆ. ಇವರು ಮಿಂಚುತ್ತಿರುವ ಕಾರಣ ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊಮ್ರೊರ್‌, ಶಹಬಾಜ್‌ ಅಹಮದ್‌ ಮತ್ತು ಸುಯಶ್‌ ಪ್ರಭುದೇಸಾಯಿ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕಕ್ಕೆ ಇನ್ನೂ ನಿಜವಾದ ಅಗ್ನಿಪರೀಕ್ಷೆ ಎದುರಾಗಿಲ್ಲ. ಏ.6 ರಂದು ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ ಆರ್‌ಸಿಬಿಗೆ 81 ರನ್‌ಗಳ ಸೋಲು ಎದುರಾಗಿತ್ತು. ಕೆಕೆಆರ್‌ಗೆ ಜಯ ಅನಿವಾರ್ಯ: ಕೆಕೆಆರ್‌ ತಂಡ ಗೆಲ್ಲಲೇಬೇಕಾದ ಒತ್ತಡದೊಂದಿಗೆ ಆಡಲಿದೆ. ನಿತೀಶ್‌ ರಾಣಾ ನೇತೃತ್ವದ ಬಳಗ, ಏಳು ಪಂದ್ಯಗಳಿಂದ ಕಲೆಹಾಕಿರುವುದು ನಾಲ್ಕು ಪಾಯಿಂಟ್ಸ್‌ ಮಾತ್ರ. ಐದು ಪಂದ್ಯಗಳಲ್ಲಿ ಎಡವಿರುವ ತಂಡಕ್ಕೆ ಇನ್ನೊಂದು ಸೋಲು ಎದುರಾದರೆ, ‘ಪ್ಲೇ ಆಫ್‌’ ಪ್ರವೇಶದ ಹಾದಿ ಇನ್ನಷ್ಟು ಕಠಿಣವಾಗಲಿದೆ. ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿಯನ್ನು ತುಂಡರಿಸುವ ವಿಶ್ವಾಸದೊಂದಿಗೆ ಕೋಲ್ಕತ್ತದ ತಂಡ, ಕಣಕ್ಕಿಳಿಯಲಿದೆ. ಭಾನುವಾರ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 49 ರನ್‌ಗಳಿಂದ ಪರಾಭವಗೊಂಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಅಸ್ಥಿರ ಪ್ರದರ್ಶನ ತಂಡವನ್ನು ಕಾಡುತ್ತಿದೆ. ನಾಯಕ ನಿತೀಶ್‌ ಅಲ್ಲದೆ ನಾರಾಯಣ್‌ ಜಗದೀಶನ್‌, ವೆಂಕಟೇಶ್‌ ಅಯ್ಯರ್‌ ಮತ್ತು ರಿಂಕು ಸಿಂಗ್‌ ಅವರಿಂದ ಛಲದ ಆಟ ಮೂಡಿಬರಬೇಕಿದೆ. ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಲಯ ಕಂಡುಕೊಳ್ಳಲು ವಿಫಲರಾಗಿರುವುದು ಕೂಡಾ ಕೋಲ್ಕತ್ತ ತಂಡದ ಯೋಜನೆಗಳು ತಲೆಕೆಳಗಾಗಲು ಕಾರಣ. ಮೊಹಮ್ಮದ್‌ ಸಿರಾಜ್‌, ವೇಯ್ನ್‌ ಪಾರ್ನೆಲ್‌ ಮತ್ತು ಹರ್ಷಲ್‌ ಪಟೇಲ್‌ ಅವರನ್ನೊಳಗೊಂಡ ಆರ್‌ಸಿಬಿ ಬೌಲಿಂಗ್‌ ವಿಭಾಗ ಒಡ್ಡುವ ಸವಾಲನ್ನು ಕೆಕೆಆರ್‌ ಬ್ಯಾಟರ್‌ಗಳು ಎಷ್ಟರಮಟ್ಟಿಗೆ ಎದುರಿಸಿ ನಿಲ್ಲುವರು ಎಂಬುದನ್ನು ನೋಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.