2023 | ಅಗ್ರಸ್ಥಾನಕ್ಕೇರಿದ ಗುಜರಾತ್‌ ಟೈಟನ್ಸ್‌ ಕೋಲ್ಕತ್ತ: ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡದವರು ಹ್ಯಾಟ್ರಿಕ್ ಗೆಲುವಿನ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ‘ಪ್ಲೇ ಆಫ್‌’ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರು. ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ ಬಳಗ ಏಳು ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿತು. ಟೈಟನ್ಸ್‌ ತಂಡ ಈ ಮೂಲಕ ತವರು ನೆಲದಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ಆ ಪಂದ್ಯದಲ್ಲಿ ರಿಂಕು ಸಿಂಗ್‌ ಐದು ಸಿಕ್ಸರ್‌ಗಳನ್ನು ಹೊಡೆದು ಕೆಕೆಆರ್‌ಗೆ ರೋಚಕ ಜಯ ತಂದುಕೊಟ್ಟಿದ್ದರು. ಮೊದಲು ಬ್ಯಾಟ್‌ ಮಾಡಿದ ನಿತೀಶ್‌ ರಾಣಾ ಬಳಗ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 179 ರನ್ ಗಳಿಸಿತು. ಮೊಹಮ್ಮದ್‌ ಶಮಿ (33ಕ್ಕೆ 3), ಜೋಶ್‌ ಲಿಟ್ಲ್‌ (25ಕ್ಕೆ 2) ಮತ್ತು ನೂರ್‌ ಅಹ್ಮದ್‌ (21ಕ್ಕೆ 2) ಅವರು ಪರಿಣಾಮಕಾರಿ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸಿದರು. ಇದಕ್ಕೆ ಉತ್ತರವಾಗಿ ಟೈಟನ್ಸ್‌, 17.5 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಗೆದ್ದಿತು. ಅರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ (49 ರನ್‌, 35 ಎ.) ಮತ್ತು ಸ್ಫೋಟಕ ಆಟವಾಡಿದ ವಿಜಯ್‌ ಶಂಕರ್‌ (ಅಜೇಯ 51, 24 ಎ.) ಅವರು ನಿರಾಯಾಸ ಗೆಲುವಿಗೆ ಕಾರಣರಾದರು. ಗಿಲ್‌ ಅವರು ಮೊದಲ ವಿಕೆಟ್‌ಗೆ ಸಹಾ ಜತೆ 41 ಹಾಗೂ ಎರಡನೇ ವಿಕೆಟ್‌ಗೆ ಹಾರ್ದಿಕ್‌ ಪಾಂಡ್ಯ (26) ಅವರೊಂದಿಗೆ 50 ರನ್‌ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಅರ್ಧಶತಕ ಪೂರೈಸಲು ಒಂದು ರನ್‌ ಬೇಕಿದ್ದಾಗ ಗಿಲ್‌ ಅವರು ಸುನಿಲ್‌ ನಾರಾಯಣ ಎಸೆತದಲ್ಲಿ ಆ್ಯಂಡ್ರೆ ರಸೆಲ್‌ಗೆ ಕ್ಯಾಚಿತ್ತರು. ವಿಜಯ್‌ ಮತ್ತು ಡೇವಿಡ್‌ ಮಿಲ್ಲರ್‌ (ಅಜೇಯ 32, 18 ಎ.) ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 39 ಎಸೆತಗಳಲ್ಲಿ 87 ರನ್ ಸೇರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. 26 ರನ್‌ ಗಳಿಸಿದ್ದಾಗ ಮಿಲ್ಲರ್‌ಗೆ ಜೀವದಾನ ಲಭಿಸಿತ್ತು. ಸುಯಶ್‌ ಶರ್ಮಾ ಅವರು ಕ್ಯಾಚ್‌ ಕೈಬಿಟ್ಟರು. ಈ ವೇಳೆ ಟೈಟನ್ಸ್‌ ಗೆಲುವಿಗೆ 29 ಎಸೆತಗಳಲ್ಲಿ 51 ರನ್‌ಗಳು ಬೇಕಿದ್ದವು. ಕೈಚೆಲ್ಲಿದ ಕ್ಯಾಚ್‌ ಕೆಕೆಆರ್‌ಗೆ ದುಬಾರಿಯಾಗಿ ಪರಿಣಮಿಸಿತು. ವಿಜಯ್‌ ಐದು ಹಾಗೂ ಮಿಲ್ಲರ್‌ ಎರಡು ಸಿಕ್ಸರ್‌ ಹೊಡೆದರು. ಎಂಟು ಪಂದ್ಯಗಳಿಂದ 12 ಪಾಯಿಂಟ್ಸ್‌ ಕಲೆಹಾಕಿರುವ ಟೈಟನ್ಸ್‌ ತಂಡ ಅಗ್ರಸ್ಥಾನದಲ್ಲಿದೆ. ಇನ್ನು ಎರಡು ಪಂದ್ಯಗಳನ್ನು ಗೆದ್ದರೂ, ‘ಪ್ಲೇ ಆಫ್‌’ನಲ್ಲಿ ಸ್ಥಾನ ಪಡೆಯಲಿದೆ. ಮತ್ತೊಂದೆಡೆ ಆರನೇ ಸೋಲು ಅನುಭವಿಸಿದ ಕೆಕೆಆರ್‌ ತಂಡದ ಪ್ಲೇ ಆಫ್‌ ಪ್ರವೇಶದ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ. ಗುರ್ಬಾಜ್‌ ಅಬ್ಬರದ ಆಟ ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತ ತಂಡದ ಪರ ಆರಂಭಿಕ ಬ್ಯಾಟರ್‌ ರಹಮಾನುಲ್ಲಾ ಗುರ್ಬಾಜ್ (81 ರನ್‌, 39 ಎ.) ಬೀಸಾಟ ಆಡಿದರು. ಅಫ್ಗಾನಿಸ್ತಾನದ ಈ ಆಟಗಾರ ಏಳು ಸಿಕ್ಸರ್‌ ಮತ್ತು ಐದು ಬೌಂಡರಿ ಹೊಡೆದರು. ಅವರನ್ನು ಅದೇ ದೇಶದ ಇಬ್ಬರು ಆಟಗಾರರು ಸೇರಿಕೊಂಡು ಔಟ್‌ ಮಾಡಿದ್ದು ವಿಶೇಷ. ಅವರು ನೂರ್‌ ಅಹ್ಮದ್‌ ಎಸೆತದಲ್ಲಿ ರಶೀದ್‌ ಖಾನ್‌ಗೆ ಕ್ಯಾಚಿತ್ತರು. ಕೆಕೆಆರ್‌ ತಂಡದ ಮಧ್ಯಮ ಕ್ರಮಾಂಕ ವಿಫಲವಾಯಿತು. ರಸೆಲ್‌ ಕೊನೆಯಲ್ಲಿ ರಟ್ಟೆಯರಳಿಸಿದ್ದರಿಂದ ಸವಾಲಿನ ಮೊತ್ತ ಪೇರಿಸಿತು. ರಶೀದ್‌ ತಮ್ಮ ನಾಲ್ಕು ಓವರ್‌ಗಳಲ್ಲಿ 54 ರನ್‌ ಬಿಟ್ಟುಕೊಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.