ಐಪಿಎಲ್‌ನ ಎರಡನೇ ಅತಿ ದೊಡ್ಡ ಮೊತ್ತ ಪೇರಿಸಿದ ಸೂಪರ್‌ ಜೈಂಟ್ಸ್‌: ಪಂಜಾಬ್‌ಗೆ ಸೋಲು ಮೊಹಾಲಿ: ಬ್ಯಾಟರ್‌ಗಳ ಅಬ್ಬರದಿಂದಾಗಿ ಲಖನೌ ಸೂಪರ್ ಜೈಂಟ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಯಲ್ಲಿ ಎರಡನೇ ದೊಡ್ಡ ಮೊತ್ತವನ್ನು ದಾಖಲಿಸಿ, ಪಂಜಾಬ್‌ ಕಿಂಗ್ಸ್‌ ತಂಡವನ್ನು56 ರನ್‌ಗಳಿಂದ ಮಣಿಸಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 257 ರನ್‌ ಗಳಿಸಿತು. ಹತ್ತು ವರ್ಷದ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ವಿಕೆಟ್‌ಗಳಿಗೆ 263 ರನ್‌ ಗಳಿಸಿತ್ತು. ಅದರ ನಂತರ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ. ತಂಡದ ಆರಂಭಿಕ ಬ್ಯಾಟರ್‌ ಕೈಲ್ ಮೇಯರ್ಸ್ (54; 24ಎ, 4X7, 6X4) ಹಾಗೂ ಮಾರ್ಕಸ್ ಸ್ಟೋಯಿನಿಸ್ (72; 40ಎ, 4X6, 6X5) ಅರ್ಧಶತಕಗಳನ್ನು ಗಳಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ರನ್ ಹರಿದು ಬರಲು ನಿಕೊಲಸ್ ಪೂರನ್ (45; 19 ಎ, 4X7, 6X1) ಅವರ ಬೀಸಾಟ ಕಾರಣವಾಯಿತು. ಪಂಜಾಬ್‌ ಕಿಂಗ್ಸ್ ತಂಡ ದಿಟ್ಟವಾಗಿ ಹೋರಾಡಿದರೂ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟಾಯಿತು. ಕಠಿಣ ಸವಾಲು ಬೆನ್ನಟ್ಟಿದ ತಂಡ, ಪ್ರಭಸಿಮ್ರನ್‌ ಸಿಂಗ್‌ ಮತ್ತು ನಾಯಕ ಶಿಖರ್‌ ಧವನ್‌ ಅವರನ್ನು ತಂಡ ಬೇಗನೇ ಕಳೆದುಕೊಂಡಿತು. ಅಥರ್ವ ತೈಡೆ (66 ರನ್‌, 36 ಎ.), ಸಿಕಂದರ್‌ ರಝಾ (36 ರನ್‌, 22 ಎ.), ಲಿಯಾಮ್‌ ಲಿವಿಂಗ್‌ಸ್ಟೋನ್‌ ಮತ್ತು ಜಿತೇಶ್‌ ಶರ್ಮಾ (24 ರನ್‌, 10 ಎ.) ಅವರು ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ಲಖನೌ ಬೌಲರ್‌ಗಳಲ್ಲಿ ಯಶ್‌ ಠಾಕೂರ್‌ (37ಕ್ಕೆ 4) ಮತ್ತು ನವೀನ್‌ ಉಲ್‌ ಹಕ್‌ (30ಕ್ಕೆ 3) ಅವರು ಗಮನ ಸೆಳೆದರು. ಇದಕ್ಕೂ ಮುನ್ನ ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಹುಲ್ ಮತ್ತು ಮೇಯರ್ಸ್ ಉತ್ತಮ ಆರಂಭ ನೀಡಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಕಗಿಸೊ ರಬಾಡ ಹಾಕಿದ ಎಸೆತದಲ್ಲಿ ರಾಹುಲ್ (12 ರನ್) ಔಟಾದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 41 ರನ್‌ಗಳು ಸೇರಿದವು. ಮೇಯರ್ಸ್ ಹಾಗೂ ಆಯುಷ್ ಬಡೋಣಿ ಸೇರಿ ಬೌಲರ್‌ಗಳನ್ನು ದಂಡಿಸಿದರು. ಆರನೇ ಓವರ್‌ನಲ್ಲಿ ಮೇಯರ್ಸ್ ವಿಕೆಟ್ ಗಳಿಸುವಲ್ಲಿ ರಬಾಡ ಯಶಸ್ವಿಯಾದರು. ಆದರೆ ಇದರ ನಂತರ ಪಂಜಾಬ್ ತಂಡದ ಯೋಜನೆಗಳು ತಲೆಕೆಳಗಾದವು. ಆಯುಷ ಜೊತೆಗೂಡಿದ ಸ್ಟೋಯಿನಿಸ್ ಮಿಂಚಿನಂತಹ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ತಂಡದ ಮೊತ್ತವು ಶರವೇಗದಲ್ಲಿ ಮೇಲಕ್ಕೇರಿತು. ಸ್ಟೋಯಿನಿಸ್ ಹಾಗೂ ಆಯುಷ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 89 ರನ್‌ ಸೇರಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಎಸೆತದಲ್ಲಿ ಆಯುಷ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಆಗ ಕ್ರೀಸ್‌ಗೆ ಕಾಲಿಟ್ಟ ನಿಕೊಲಸ್ ಪೂರನ್ ಕೂಡ ಬ್ಯಾಟ್‌ ಬೀಸಲು ಆರಂಭಿಸಿದರು. ಒಂದು ಕಡೆ ಸ್ಟೊಯಿನಿಸ್ ಇನ್ನೊಂದೆಡೆ ಪೂರನ್ ಅವರ ಅಬ್ಬರ ಮುಗಿಲುಮುಟ್ಟಿತು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 76 ರನ್‌ಗಳು ಸೇರಿದವು. ಇದಕ್ಕಾಗಿ ಅವರಿಬ್ಬರೂ 28 ಎಸೆತಗಳನ್ನು ಆಡಿದರು. 19ನೇ ಓವರ್‌ನಲ್ಲಿ ಸ್ಟೋಯಿನಿಸ್ ಔಟಾದರು. ಪೂರನ್ ಮತ್ತೊಂದು ಓವರ್ ಆಡಿ ಒಂದಿಷ್ಟು ರನ್‌ಗಳನ್ನು ಸೂರೆ ಮಾಡಿದರು. ಇದರಿಂದಾಗಿ ತಂಡದ ಮೊತ್ತವು 250ರ ಗಡಿ ದಾಟಿತು. ಕೊನೆಯ ಐದೂ ಓವರ್‌ಗಳಲ್ಲಿ 73 ರನ್‌ಗಳು ತಂಡದ ಖಾತೆ ಸೇರಿದವು. ಲಖನೌ ತಂಡದ ಬ್ಯಾಟರ್‌ಗಳು ಒಟ್ಟು 27 ಬೌಂಡರಿ ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.