2023: ಡೆಲ್ಲಿಗೆ ಸನ್‌ರೈಸರ್ಸ್ ಸವಾಲು ಇಂದು ನವದೆಹಲಿ: ಐಪಿಎಲ್ ಅಂಕಪಟ್ಟಿಯ ಕೊನೆಯ ಎರಡು ಸ್ಥಾನಗಳಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈ ಟೂರ್ನಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಆರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಲಿವೆ. ಐದು ದಿನಗಳ ಹಿಂದಷ್ಟೇ ಉಭಯ ತಂಡಗಳೂ ಹೈದರಾಬಾದಿನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಡೆಲ್ಲಿ ತಂಡವು 7 ರನ್‌ಗಳಿಂದ ಜಯಿಸಿತ್ತು. ಎರಡನೇ ಸುತ್ತಿನ ಆರಂಭಿಕ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗುತ್ತಿವೆ. ತನ್ನ ತವರಿನಲ್ಲಿಯೂ ಗೆಲುವಿನ ಓಟ ಮುಂದುವರಿಸುವ ಛಲದಲ್ಲಿ ಡೆಲ್ಲಿ ಇದೆ. ಸತತ ಐದು ಪಂದ್ಯಗಳನ್ನು ಸೋತ ನಂತರದ ಎರಡು ಪಂದ್ಯಗಳಲ್ಲಿ ಡೆಲ್ಲಿ ಜಯಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಥಿತಿಯೂ ಇದೇ ಆಗಿದೆ. ನೆಟ್ ರನ್‌ ರೇಟ್‌ನಲ್ಲಿ ಸ್ವಲ್ಪ ಹೆಚ್ಚು ಇರುವುದರಿಂದ ಒಂಬತ್ತನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶದ ಕನಸು ಎರಡೂ ತಂಡಗಳಿಗೆ ಬಹಳ ದೂರದಲ್ಲಿದೆ. ಅದಕ್ಕಾಗಿ ಮುಂದಿನ ಎಲ್ಲ ಪಂದ್ಯಗಳನ್ನೂ ಜಯಿಸುವ ಸವಾಲೂ ಇದೆ. ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್ ಮತ್ತು ಮನೀಷ್ ಪಾಂಡೆ ಅವರಿದ್ದರೂ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಹಾಗೂ ಎನ್ರಿಚ್ ನಾಕಿಯಾ ಉತ್ತಮ ಲಯದಲ್ಲಿದ್ದಾರೆ. ಆದರೆ ಉಳಿದವರಿಂದ ಅಂತಹ ಪ್ರದರ್ಶನ ಕಂಡುಬರುತ್ತಿಲ್ಲ. ಸನ್‌ರೈಸರ್ಸ್ ತಂಡವು ಭುವನೇಶ್ವರ್ ಕುಮಾರ್, ಟಿ ನಟರಾಜನ್ ಹಾಗೂ ಉಮ್ರಾನ್ ಮಲಿಕ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ಸ್ಪಿನ್ ಬೌಲಿಂಗ್ ವಿಭಾಗ ಸೊರಗಿದೆ. ಆದರೆ ಇಲ್ಲಿಯ ಪಿಚ್‌ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಪಂದ್ಯ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.