ಮದುಷ್ಕ, ಮೆಂಡಿಸ್‌ ದ್ವಿಶತಕ: ರನ್‌ ಮಳೆ ಸುರಿಸಿದ ಶ್ರೀಲಂಕಾ ಗಾಲೆ, ಶ್ರೀಲಂಕಾ: ನಿಶಾನ್‌ ಮದುಷ್ಕ (205) ಮತ್ತು ಕುಶಾಲ್ ಮೆಂಡಿಸ್‌ (245) ಇಬ್ಬರೂ ಐರ್ಲೆಂಡ್‌ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದರು. ಎರಡನೇ ಟೆಸ್ಟ್‌ನಲ್ಲಿ ರನ್‌ ಹೊಳೆ ಮುಂದುವರಿದಿದ್ದು, ನಾಲ್ಕನೇ ದಿನವಾದ ಗುರುವಾರ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 704 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. 212 ರನ್‌ಗಳಿಂದ ಹಿಂದುಳಿದ ಐರ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 56 ರನ್‌ ಗಳಿಸಿದ್ದು ಪಂದ್ಯ ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಿಸುತ್ತಿದೆ. ಶ್ರೀಲಂಕಾ ತಂಡ, ಕೊನೆಯ ದಿನವಾದ ಶುಕ್ರವಾರ ಗೆಲ್ಲಲು ಯಶಸ್ವಿಯಾದಲ್ಲಿ ಐರ್ಲೆಂಡ್‌ ಆಡಿದ ಎಲ್ಲ ಆರೂ ಟೆಸ್ಟ್‌ಗಳಲ್ಲಿ ಸೋಲು ಕಂಡಂತಾಗುತ್ತದೆ. ಮೊದಲ ನಾಲ್ವರೂ ಆಟಗಾರರು ಶತಕ ಬಾರಿಸಿದ್ದು ಟೆಸ್ಟ್‌ ಇತಿಹಾಸದಲ್ಲಿ ಇದು ಮೂರನೇ ನಿದರ್ಶನವಾಗಿದೆ. ಮದುಷ್ಕ ನಿನ್ನೆಯ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಮಹೇಲ ಜಯವರ್ಧನೆ ನಂತರ ದ್ವಿತಶಕ ಬಾರಿಸಿದ ಎರಡನೇ ಕಿರಿಯ ಆಟಗಾರ ಎನಿಸಿದರು. ಈ ಹಿಂದೆ ಎರಡು ಬಾರಿ ದ್ವಿಶತಕ ತಪ್ಪಿಸಿಕೊಂಡಿದ್ದ ಮೆಂಡಿಸ್‌ ಇಲ್ಲಿ ಆ ಮೈಲಿಗಲ್ಲು ತಲುಪಿಸಿದರು. 11 ಸಿಕ್ಸರ್‌ ಹೊಡೆದ ಅವರು ವಾಸಿಂ ಅಕ್ರಂ ದಾಖಲೆ ಸರಿಗಟ್ಟುವ ಯತ್ನದಲ್ಲಿ ಲಾಂಗ್‌ಆಫ್‌ನಲ್ಲಿ ಕ್ಯಾಚಿತ್ತರು. ಶ್ರೀಲಂಕಾದ ಭಾವಿ ನಾಯಕ ಎನಿಸಿದರುವ ಅವರ ಆಟದಲ್ಲಿ 18 ಬೌಂಡರಿಗಳೂ ಇದ್ದವು. ಆ್ಯಂಜೆಲೊ ಮ್ಯಾಥ್ಯೂಸ್‌ ಶತಕ ದಾಟಿದ ತಕ್ಷಣ (ಔಟಾಗದೇ 100, 114 ಎ) ನಾಯಕ ಕರುಣಾರತ್ನೆ ಇನಿಂಗ್ಸ್‌ ಡಿಕ್ಲೇರ್ ಮಾಡಿದರು. ಕರುಣಾರತ್ನೆ (115) ಬುಧವಾರವೇ ಶತಕ ಪೂರೈಸಿದ್ದರು. ಐರ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 492 ರನ್‌ ಹೊಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.