ಟೆಸ್ಟ್‌: ಲಂಕಾ ‘ಕ್ಲೀನ್‌ಸ್ವೀಪ್‌’ ಸಾಧನೆ- ಐರ್ಲೆಂಡ್‌ಗೆ ಸೋಲು ಗಾಲೆ, ಶ್ರೀಲಂಕಾ: ರಮೇಶ್‌ ಮೆಂಡಿಸ್‌ (64ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಶ್ರೀಲಂಕಾ ತಂಡ, ಎರಡನೇ ಹಾಗೂ ಕೊನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಇನಿಂಗ್ಸ್‌ ಮತ್ತು 10 ರನ್‌ಗಳಿಂದ ಮಣಿಸಿ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿತು. ಎರಡು ವಿಕೆಟ್‌ಗಳಿಗೆ 54 ರನ್‌ಗಳಿಂದ ಆಟ ಮುಂದುವರಿಸಿದ್ದ ಐರ್ಲೆಂಡ್, ಅಂತಿಮ ದಿನವಾದ ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ 77.3 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟಾಯಿತು. ಶ್ರೀಲಂಕಾ ತಂಡಕ್ಕೆ ಟೆಸ್ಟ್‌ ಪಂದ್ಯಗಳಲ್ಲಿ ದೊರೆತ 100ನೇ ಗೆಲುವು ಇದು. ಮೊದಲ ಟೆಸ್ಟ್‌ ಪಂದ್ಯವನ್ನು ಆತಿಥೇಯರು ಇನಿಂಗ್ಸ್‌ ಹಾಗೂ 280 ರನ್‌ಗಳಿಂದ ಗೆದ್ದುಕೊಂಡಿದ್ದರು. ಹ್ಯಾರಿ ಟೆಕ್ಟರ್‌ (85) ಮತ್ತು ಆ್ಯಂಡಿ ಬಲ್ಬಿರ್ನಿ (46) ಅವರನ್ನು ಹೊರತುಪಡಿಸಿದರೆ ಐರ್ಲೆಂಡ್‌ನ ಇತರ ಬ್ಯಾಟರ್‌ಗಳಿಗೆ ಲಂಕಾ ಬೌಲರ್‌ಗಳ ಶಿಸ್ತಿನ ದಾಳಿಯನ್ನು ಎದುರಿಸಿ ನಿಲ್ಲಲು ಆಗಲಿಲ್ಲ. ಅಸಿತಾ ಫೆರ್ನಾಂಡೊ (30ಕ್ಕೆ 3) ಮತ್ತು ಪ್ರಭಾತ್‌ ಜಯಸೂರ್ಯ (88ಕ್ಕೆ 2) ಅವರು, ಮೆಂಡಿಸ್‌ಗೆ ತಕ್ಕ ಬೆಂಬಲ ನೀಡಿದರು. 2017 ರಲ್ಲಿ ಟೆಸ್ಟ್‌ ಪಂದ್ಯ ಆಡುವ ಅವಕಾಶ ಪಡೆದ ಐರ್ಲೆಂಡ್‌ ಇದುವರೆಗೆ ಆಡಿದ ಎಲ್ಲ ಆರೂ ಪಂದ್ಯಗಳನ್ನು ಸೋತಂತಾಗಿದೆ. ಐರ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 492 ರನ್‌ ಗಳಿಸಿದ್ದರೆ, ಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳಿಗೆ 704 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.