2023: ಲಖನೌ ವಿರುದ್ಧ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಚಂಡೀಗಢ: ಇಲ್ಲಿನ ಮೊಹಾಲಿ ಕ್ರೀಡಾಂಗಣದಲ್ಲಿ ಇಂದು ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ಮತ್ತು ಲಖನೌ ಸೂಪರ್ ಜೇಂಟ್ಸ್(ಎಲ್ಎಸ್‌ಜಿ) ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಪಂಜಾಬ್ ಟಾಸ್ ಗೆದ್ದುಕೊಂಡಿದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಲಖನೌ ತಂಡದ ಆರಂಭಿಕ ಬ್ಯಾಟರ್ ಕೂಡ ಆಗಿರುವ ರಾಹುಲ್ ಅವರ ಸ್ಟ್ರೈಕ್‌ ರೇಟ್ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚುರುಕಾಗಿ ರನ್‌ ಗಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲ. ಇದರಿಂದಾಗಿ ಕಳೆದ ಶನಿವಾರ ನಡೆದಿದ್ದ ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ಸಾಧಾರಣ ಮೊತ್ತದ (136 ರನ್) ಗುರಿ ಸಾಧನೆ ಮಾಡುವಲ್ಲಿಯೂ ತಂಡವು ಎಡವಿತ್ತು. ಅದರಿಂದಾಗಿ ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ರಾಹುಲ್ ಮೇಲೆ ಕಣ್ಣು ನೆಟ್ಟಿದೆ. ಇಲ್ಲಿ ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ 200 ರನ್‌ಗಳಿಗಿಂತ ಹೆಚ್ಚಿನ ಮೊತ್ತ ದಾಖಲಾಗಿಲ್ಲ. ಆದರೂ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಪಂಜಾಬ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪಂಜಾಬ್ ತಂಡದ ಆರಂಭಿಕ ಜೋಡಿ ಪ್ರಭಸಿಮ್ರನ್ ಸಿಂಗ್ ಮತ್ತು ಮ್ಯಾಥ್ಯೂ ಶಾರ್ಟ್ ಅವರು ಉತ್ತಮ ಆರಂಭ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಶಾರೂಕ್ ಖಾನ್ ಹಾಗೂ ಆಲ್‌ರೌಂಡರ್ ಸ್ಯಾಮ್ ಕರನ್ ಅವರು ಬಿರುಸಿನ ಆಟವಾಡುವ ಬ್ಯಾಟರ್‌ಗಳಾಗಿದ್ದಾರೆ. ಇವರು ಲಖನೌ ತಂಡದ ಬೌಲರ್‌ಗಳಾದ ಜೈದೇವ್ ಉನದ್ಕತ್, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯಿ ಹಾಗೂ ಆವೇಶ್ ಖಾನ್ ಅವರನ್ನು ಎದುರಿಸಲು ಸಿದ್ಧರಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.