ಕ್ರಿಕೆಟ್‌: ಫಖರ್ ಶತಕ; ಪಾಕ್‌ಗೆ ಗೆಲುವು ರಾವಲ್ಪಿಂಡಿ, ಪಾಕಿಸ್ತಾನ: ಆರಂಭಿಕ ಬ್ಯಾಟರ್‌ ಫಖರ್‌ ಜಮಾನ್‌ (117) ಅವರು ಸೊಗಸಾದ ಶತಕದ ಮೂಲಕ ಪಾಕಿಸ್ತಾನ ತಂಡಕ್ಕೆ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಐದು ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟಾಮ್‌ ಲಥಾಮ್‌ ಬಳಗ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 288 ರನ್‌ ಗಳಿಸಿತು. ಆತಿಥೇಯ ತಂಡ ಇನ್ನೂ ಒಂಬತ್ತು ಎಸೆತಗಳು ಇರುವಂತೆಯೇ ಐದು ವಿಕೆಟ್‌ ಕಳೆದುಕೊಂಡು 291 ರನ್‌ ಗಳಿಸಿ ಗೆದ್ದಿತು. ಇದರೊಂದಿಗೆ ಬಾಬರ್‌ ಅಜಂ ಬಳಗ ಐದು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಸಾಧಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಪಾಕ್‌ ತಂಡಕ್ಕೆ ಫಖರ್‌ ಮತ್ತು ಇಮಾಮ್‌ ಉಲ್‌ ಹಕ್‌ (60 ರನ್, 65 ಎ.) ಮೊದಲ ವಿಕೆಟ್‌ಗೆ 124 ರನ್‌ ಸೇರಿಸಿದರು. ಫಖರ್‌ ಆ ಬಳಿಕ ಎರಡನೇ ವಿಕೆಟ್‌ಗೆ ಬಾಬರ್‌ ಅಜಂ (49 ರನ್‌, 46 ಎ.) ಅವರೊಂದಿಗೆ 90 ರನ್‌ಗಳ ಜತೆಯಾಟ ನೀಡಿದರು. ಅಜೇಯ 42 ರನ್‌ (34 ಎ.) ಗಳಿಸಿದ ಮೊಹಮ್ಮದ್‌ ರಿಜ್ವಾನ್‌ ಕೂಡಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಎಡಗೈ ಬ್ಯಾಟರ್‌ ಫಖರ್, ಏಕದಿನ ಕ್ರಿಕೆಟ್‌ನಲ್ಲಿ ಒಂಬತ್ತನೇ ಶತಕ ಗಳಿಸಿದರು. 114 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್ ತಂಡದ ಪರ ಡೆರಿಲ್‌ ಮಿಚೆಲ್‌ (113 ರನ್‌, 115 ಎ.) ಶತಕ ಗಳಿಸಿದರೆ, ಆರಂಭಿಕ ಬ್ಯಾಟರ್‌ ವಿಲ್‌ ಯಂಗ್ 86 ರನ್‌ ಕಲೆಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.