ಕೋಲ್ಕತ್ತ ನೈಟ್ ರೈಡರ್ಸ್ ಮುಂದೆ ಕಠಿಣ ಸವಾಲು ಕೋಲ್ಕತ್ತ: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಶನಿವಾರ ಈಡನ್ ಗಾರ್ಡನ್‌ನಲ್ಲಿ ಮುಖಾಮುಖಿಯಾಗಲಿವೆ. ಕೋಲ್ಕತ್ತ ತಂಡವು ಸತತ ನಾಲ್ಕು ಪಂದ್ಯಗಳಲ್ಲಿ ಸೋತಿತ್ತು. ಆದರೆ, ಬೆಂಗಳೂರಿನಲ್ಲಿ ಈಚೆಗೆ ನಡೆದ ಪಂದ್ಯದಲ್ಲಿ ಕೋಲ್ಕತ್ತ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಜಯದ ಹಳಿಗೆ ಮರಳಿರುವ ಹುಮ್ಮಸ್ಸಿನಲ್ಲಿ ತಂಡವಿದೆ. ಆತಿಥೇಯ ತಂಡದ ರಿಂಕು ಸಿಂಗ್ ಮತ್ತು ನಿತೀಶ್ ರಾಣಾ ಅವರು ಉತ್ತಮ ಲಯದಲ್ಲಿದ್ದಾರೆ. ಡೇವಿಡ್ ವೈಸ್ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದರು. ಆದರೆ, ವಿಕೆಟ್‌ ಕೀಪರ್ ಲಿಟನ್ ದಾಸ್ ಅವರು ಕೌಟುಂಬಿಕ ಕಾರಣಗಳಿಗಾಗಿ ಸ್ವದೇಶಕ್ಕೆ ಮರಳಿದ್ದಾರೆ. ಅದರಿಂದಾಗಿ ಕೋಲ್ಕತ್ತ ತಂಡಕ್ಕೆ ಎನ್. ಜಗದೀಶನ್ ಅವರು ಕೀಪಿಂಗ್ ಹೊಣೆ ನಿಭಾಯಿಸುವರು. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಸುನಿಲ್ ನಾರಾಯಣ ಉತ್ತಮ ಫಾರ್ಮ್‌ನಲ್ಲಿದ್ಧಾರೆ. ಮಧ್ಯಮವೇಗಿ ಆ್ಯಂಡ್ರೆ ರಸೆಲ್ ಮತ್ತು ಶಾರ್ದೂಲ್ ಠಾಕೂರ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಸಮರ್ಥರು. ಗುಜರಾತ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಿಸಿ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಳಗವು ಇದುವರೆಗೆ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಜಯಿಸಿದೆ. ಇದರಲ್ಲಿ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಮತ್ತು ನಾಯಕ ಹಾರ್ದಿಕ್ ಅವರ ಉಪಯುಕ್ತ ಕಾಣಿಕೆ ಇದೆ. ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಅನುಭವಿ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಸ್ಪಿನ್ನರ್ ರಶೀದ್ ಖಾನ್ ಮತ್ತು ನೂರ್ ಅಹಮದ್ ಅವರು ಮಿಂಚುತ್ತಿದ್ದಾರೆ. ಕೆಕೆಆರ್ ತಂಡದ ಖಾತೆಯಲ್ಲಿ ಕೇವಲ ಆರು ಅಂಕಗಳು ಇವೆ. ಬಳಗವು ಈಗಾಗಲೇ ಎಂಟು ಪಂದ್ಯಗಳನ್ನೂ ಆಡಿದೆ. ಪ್ಲೇ ಆಫ್‌ ಪ್ರವೇಶದ ಕನಸು ಜೀವಂತವಾಗುಳಿಯಬೇಕಾದರೆ ಇನ್ನುಳಿದಿರುವ ಆರು ಪಂದ್ಯಗಳಲ್ಲಿ ಕನಿಷ್ಠ ಐದರಲ್ಲಿ ಜಯಿಸುವ ಒತ್ತಡದಲ್ಲಿದೆ. ಇದರಿಂದಾಗಿ ಗುಜರಾತ್ ತಂಡದ ವಿರುದ್ಧ ವಿಭಿನ್ನ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಂದ್ಯ ಆರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.