2023 | ಚೆನ್ನೈನಲ್ಲಿ ಇಂದು ‘ಕಿಂಗ್ಸ್‌’ ಹಣಾಹಣಿ ಚೆನ್ನೈ : ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಭಾನುವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಸೂಪರ್‌ ಕಿಂಗ್ಸ್‌ ತಂಡ ಗೆಲ್ಲುವ ‘ಫೇವರಿಟ್‌’ ಎನಿಸಿಕೊಂಡಿದ್ದು, ಪಂದ್ಯದ ಫಲಿತಾಂಶ ನಿರ್ಧರಿಸುವಲ್ಲಿ ಆತಿಥೇಯ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಹಿಂದಿನ ಪಂದ್ಯದಲ್ಲಿ ಎದುರಾದ ಸೋಲಿನ ನಿರಾಸೆಯೊಂದಿಗೆ ಉಭಯ ತಂಡಗಳು ಕಣಕ್ಕಿಳಿಯಲಿವೆ. ಸೂಪರ್‌ಕಿಂಗ್ಸ್‌ ತಂಡ ರಾಜಸ್ಥಾನ ರಾಯಲ್ಸ್‌ ಎದುರು 32 ರನ್‌ಗಳಿಂದ ಸೋತಿದ್ದರೆ, ಪಂಜಾಬ್‌ ತಂಡ, ಲಖನೌ ಸೂಪರ್‌ ಜೈಂಟ್ಸ್‌ ಕೈಯಲ್ಲಿ 56 ರನ್‌ಗಳಿಂದ ಪರಾಭವಗೊಂಡಿತ್ತು. ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಗೆಲುವಿಗೆ 203 ರನ್‌ಗಳ ಗುರಿ ಪಡೆದಿದ್ದ ಚೆನ್ನೈ ತಂಡಕ್ಕೆ ಬ್ಯಾಟಿಂಗ್‌ ಕೈಕೊಟ್ಟಿತ್ತು. ಆ ಪಂದ್ಯದಲ್ಲಿ ಮಾಡಿದ್ದ ಲೋಪಗಳನ್ನು ಬೇಗನೇ ಸರಿಪಡಿಸಿಕೊಳ್ಳುವ ಸವಾಲು ಮುಂದಿದೆ. ಡೆವೊನ್‌ ಕಾನ್ವೆ, ಋತುರಾಜ್‌ ಗಾಯವಾಡ್‌ ಮತ್ತು ಅಜಿಂಕ್ಯ ರಹಾನೆ ಅವರು ಬ್ಯಾಟಿಂಗ್‌ನಲ್ಲಿ ಚೆನ್ನೈ ತಂಡದ ಶಕ್ತಿ ಎನಿಸಿದ್ದಾರೆ. ಧೋನಿ ಅವರು ಸ್ಪಿನ್ನರ್‌ಗಳಾದ ಮಹೀಷ ತೀಕ್ಷಣ, ರವೀಂದ್ರ ಜಡೇಜ ಮತ್ತು ಮೊಯೀನ್‌ ಅಲಿ ನೆರವಿನಿಂದ ಪಂಜಾಬ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಲು ತಂತ್ರ ರೂಪಿಸಿದ್ದಾರೆ. ವೇಗದ ಬೌಲಿಂಗ್‌ ವಿಭಾಗದಲ್ಲಿ 14 ವಿಕೆಟ್‌ಗಳನ್ನು ಪಡೆದಿರುವ ತುಷಾರ್‌ ದೇಶಪಾಂಡೆ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಬ್ಯಾಟರ್‌ಗಳ ಅಸ್ಥಿರ ಪ್ರದರ್ಶನ ಪಂಜಾಬ್‌ ತಂಡದ ಚಿಂತೆಗೆ ಕಾರಣವಾಗಿದೆ. ನಾಯಕ ಶಿಖರ್‌ ಧವನ್‌ ಅವರು ತಂಡಕ್ಕೆ ಮರಳಿದರೂ, ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಸೋಲು ಎದುರಾಗಿತ್ತು. ಲಖನೌ ನೀಡಿದ್ದ 258 ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡ, 201 ರನ್‌ಗಳಿಗೆ ಆಲೌಟಾಗಿತ್ತು. ಚೆನ್ನೈ ತಂಡದ ಸ್ಪಿನ್ನರ್‌ಗಳನ್ನು ಎಚ್ಚರಿಕೆಯಿಂದ ಎದುರಿಸುವ ಸವಾಲು ಶಿಖರ್‌ ಬಳಗದ ಬ್ಯಾಟರ್‌ಗಳ ಮುಂದಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಪ್ರಭಸಿಮ್ರನ್‌ ಸಿಂಗ್‌, ಅಥರ್ವ ತೈಡೆ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್‌ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವುದು ಮುಖ್ಯ. ಸ್ಯಾಮ್‌ ಕರನ್‌ ಅವರ ಆಲ್‌ರೌಂಡ್‌ ಆಟ ಕೂಡಾ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪಂದ್ಯ ಆರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.