2023: ಬೆಂಗಳೂರಿಗೆ ಕನ್ನಡಿಗ ರಾಹುಲ್ ‘ಚಾಲೆಂಜ್’ ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಲು ಪ್ರಮುಖ ತಂಡಗಳ ನಡುವೆ ಜಿದ್ದಾಜಿದ್ದಿ ಜೋರಾಗಿಯೇ ನಡೆಯುತ್ತಿದೆ. ಅಂಕಪಟ್ಟಿಯಲ್ಲಿ ಪ್ರತಿದಿನವೂ ಏರಿಳಿತಗಳು ಕಾಣುತ್ತಿವೆ. ಈ ಕಠಿಣ ಪೈಪೋಟಿಯಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ತನ್ನ ಫ್ಲೇಆಫ್‌ ಅವಕಾಶ ಗಿಟ್ಟಿಸಿಕೊಳ್ಳಬೇಕಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸತತ ವೈಫಲ್ಯ ಈ ತಂಡದ ದೌರ್ಬಲ್ಯವಾಗಿದೆ. ಸೋಮವಾರ ಇಲ್ಲಿಯ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್ ತಂಡವನ್ನು ಎದುರಿಸಲಿರುವ ಆರ್‌ಸಿಬಿಗೆ ಈ ಅಂಶವೇ ಮೊತ್ತೊಮ್ಮೆ ಕಾಡುವ ಸಾಧ್ಯತೆ ಇದೆ. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವು ಆರ್‌ಸಿಬಿಯ ದೌರ್ಬಲ್ಯವನ್ನು ಸಮರ್ಥವಾಗಿ ಬಳಸಿಕೊಂಡಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ಅರ್ಧಶತಕ ಬಾರಿಸಲು ಸಾಧ್ಯವಾಗಿದ್ದು. ಫಫ್ ಮತ್ತು ಗ್ಲೆನ್ ಆಟ ನಡೆಯದಂತೆ ಕೆಕೆಆರ್ ನೋಡಿಕೊಂಡಿದ್ದು ಫಲಕಾರಿಯಾಗಿತ್ತು. ಗಾಯಗೊಂಡಿರುವ ಫಫ್ ಡುಪ್ಲೆಸಿ ಕಳೆದ ಮೂರು ಪಂದ್ಯಗಳಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿಯುತ್ತಿದ್ದಾರೆ. ಬ್ಯಾಟಿಂಗ್ ಮಾತ್ರ ಮಾಡುತ್ತಿದ್ದಾರೆ. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಇರುವ ತಂಡವು ಮೇಲೆ ಏರಬೇಕಾದರೆ ಮುಂಬರುವ ಪಂದ್ಯಗಳಲ್ಲಿ ಹೆಚ್ಚು ಗೆಲುವುಗಳನ್ನು ಸಾಧಿಸಬೇಕು. ಆದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಇಳಿಯುವ ಸಾಧ್ಯತೆ ಇದೆ. ಇದರಿಂದಾಗಿ ಪದಾರ್ಪಣೆಗಾಗಿ ಕಾಯುತ್ತಿರುವ ಕರ್ನಾಟಕದ ಬ್ಯಾಟರ್ ಮನೋಜ್ ಭಾಂಡಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೋದ ತಿಂಗಳು ಬೆಂಗಳೂರಿನಲ್ಲಿ ಆಡಿದ್ದ ಲಖನೌ ತಂಡವು ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿತ್ತು. ಆಗ ನಿಕೊಲಸ್ ಪೂರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರು ಅಬ್ಬರಿಸಿದ್ದರು. ಈಗಲೂ ಅವರು ಉತ್ತಮ ಲಯದಲ್ಲಿದ್ದಾರೆ. ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ಸ್ಟ್ರೈಕ್ ರೇಟ್ ಕಡಿಮೆ ಇದೆ ಎನ್ನುವುದನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಭರ್ಜರಿಯಾಗಿಯೇ ಆಡುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಎದುರು ಲಖನೌ ತಂಡವು 257 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬೌಲಿಂಗ್‌ನಲ್ಲಿಯೂ ಸ್ಪಿನ್ನರ್ ರವಿ ಬಿಷ್ಣೋಯಿ, ಅಮಿತ್ ಮಿಶ್ರಾ, ಮಧ್ಯಮವೇಗಿ ಜೈದೇವ್ ಉನದ್ಕತ್, ಆವೇಶ್ ಖಾನ್ ಆರ್‌ಸಿಬಿ ಬ್ಯಾಟಿಂಗ್ ಪಡೆಗೆ ಕಠಿಣ ಸವಾಲೊಡ್ಡಬಲ್ಲ ಸಮರ್ಥರು. ಮೂರನೇ ಸ್ಥಾನದಲ್ಲಿರುವ ಲಖನೌ ಇನ್ನಷ್ಟು ಮೇಲಿನ ಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿದೆ. ತವರಿನಂಗಳದ ಲಾಭ ಪಡೆಯುವ ವಿಶ್ವಾಸದಲ್ಲಿಯೂ ಇದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.