2023: ಪಂಜಾಬ್ ಕಿಂಗ್ಸ್‌ಗೆ ರೋಚಕ ಜಯ ಚೆನ್ನೈ: ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲಿನ ಆಘಾತ ನೀಡಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 200 ರನ್‌ ಗಳಿಸಿತ್ತು. ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ಮಾಡಿದ ಹೋರಾಟಕ್ಕೆ 4 ವಿಕೆಟ್‌ಗಳ ಜಯ ಒಲಿಯಿತು. ಲಿಯಾಮ್ ಲಿವಿಂಗ್‌ಸ್ಟೋನ್ (40; 24ಎಸೆತ) ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಆಂತಿಮ ಓವರ್‌ನಲ್ಲಿ ತಂಡಕ್ಕೆ ಒಂಬತ್ತು ರನ್‌ಗಳ ಅಗತ್ಯವಿತ್ತು. ಮಹೀಷ ಪಥಿರಾಣ ಹಾಕಿದ ಈ ಓವರ್‌ನಲ್ಲಿ ಒಂದೂ ಬೌಂಡರಿ ಅಥವಾ ಸಿಕ್ಸರ್ ದಾಖಲಾಗಲಿಲ್ಲ. ಆದರೆ ಬ್ಯಾಟರ್‌ಗಳಾದ ಸಿಕಂದರ್ ರಝಾ ಮತ್ತು ಶಾರೂಕ್ ಖಾನ್ ಅವರು ಐದು ಎಸೆತಗಳಲ್ಲಿ ಆರು ರನ್‌ಗಳನ್ನು ಗಳಿಸಿದರು. ಇದರಿಂದಾಗಿ ಕೊನೆಯ ಎಸೆತದಲ್ಲಿ ಮೂರು ರನ್‌ಗಳನ್ನು ಗಳಿಸುವ ಸವಾಲು ಇತ್ತು. ಬ್ಯಾಟರ್ ರಝಾ ಎಸೆತವನ್ನು ಬ್ಯಾಕ್‌ವರ್ಡ್‌ ಡೀಪ್ ಸ್ಕ್ವೆರ್‌ಲೆಗ್‌ಗೆ ಹೊಡೆದರು. ಅದನ್ನು ತಡೆದ ಫೀಲ್ಡರ್ ತೀಕ್ಷಣ ಚೆಂಡನ್ನು ವಿಕೆಟ್‌ಕೀಪರ್‌ ಧೋನಿಗೆ ಎಸೆಯುವ ಮುನ್ನವೇ ಬ್ಯಾಟರ್‌ಗಳು ಮೂರು ರನ್ ಪೂರೈಸಿ ಸಂಭ್ರಮ ಆಚರಿಸಿದರು. ತಿರುವು ನೀಡಿದ ಲಿಯಾಮ್: 15 ಓವರ್‌ಗಳವರೆಗೂ ಪಂದ್ಯ ಚೆನ್ನೈ ಹಿಡಿತದಲ್ಲಿತ್ತು. ತಂಡದ ಮೊತ್ತ 3 ವಿಕೆಟ್‌ಗಳಿಗೆ 129 ರನ್‌ಗಳಾಗಿತ್ತು. ಆದರೆ ತುಷಾರ್ ದೇಶಪಾಂಡೆ ಹಾಕಿದ 16ನೇ ಓವರ್‌ನಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ಪಂದ್ಯಕ್ಕೆ ತಿರುವು ನೀಡಿದರು. ಅದೊಂದೇ ಓವರ್‌ನಲ್ಲಿ 24 ರನ್‌ಗಳು ತಂಡದ ಖಾತೆ ಸೇರಿದವು. ಆ ಓವರ್‌ನ ಕೊನೆಯ ಎಸೆತದಲ್ಲಿ ಲಿಯಾಮ್ ಔಟಾದರು. ಆದರೆ ಇನ್ನೊಂದು ಬದಿಯಲ್ಲಿದ್ದ ಜಿತೇಶ್ ಶರ್ಮಾ ಮತ್ತು ಕ್ರೀಸ್‌ಗೆ ಬಂದ ಸ್ಯಾಮ್ ಕರನ್ 17ನೇ ಓವರ್‌ನಲ್ಲಿ ತಲಾ ಒಂದು ಸಿಕ್ಸ್ ಹೊಡೆದರು. ಈ ಓವರ್‌ನಲ್ಲಿ 17 ರನ್‌ಗಳು ತಂಡದ ಮೊತ್ತಕ್ಕೆ ಸೇರಿದವು. ಡೆವೊನ್ ಅರ್ಧಶತಕ: ಚೆನ್ನೈ ತಂಡದ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಅರ್ಧಶತಕ (52 ಎಸೆತಗಳಲ್ಲಿ 92) ವ್ಯರ್ಥವಾಯಿತು. ಚೆನ್ನೈ ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ಮಹೇಂದ್ರಸಿಂಗ್ ಧೋನಿ ಹೊಡೆದ ಎರಡು ಸಿಕ್ಸರ್‌ಗಳು ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದವು. ಆದರೆ, ಚೆನ್ನೈ ತಂಡದ ಬೌಲರ್‌ಗಳ ದೌರ್ಬಲ್ಯ ಮತ್ತೊಮ್ಮೆ ನಾಯಕ ಧೋನಿಯ ಅಸಮಾಧಾನಕ್ಕೆ ಕಾರಣವಾಯಿತು. ಪಂಜಾಬ್ ತಂಡದ ಯಾವುದೇ ಬ್ಯಾಟರ್ ಅರ್ಧಶತಕ ದಾಟಲಿಲ್ಲ. ಆದರೆ, ಕ್ರೀಸ್‌ಗೆ ಬಂದವರೆಲ್ಲರೂ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ನಾಯಕ ಶಿಖರ್ ಧವನ್ ಮತ್ತು ಪ್ರಭಸಿಮ್ರನ್ ಸಿಂಗ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ 50 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಅದರ ಮೇಲೆ ಉಳಿದವರು ಗೆಲುವಿನ ಸೌಧ ಕಟ್ಟಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.