2023| ಯಶಸ್ವಿ ಜೈಸ್ವಾಲ್ ಶತಕದ ಅಬ್ಬರ ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಯಶಸ್ವಿ, ತಮ್ಮ ತವರೂರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಂಟು ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಬಾರಿಸಿದರು. 62 ಎಸೆತಗಳಲ್ಲಿ 124 ರನ್‌ ಗಳಿಸಿದರು. ಅವರ ಅಬ್ಬರದ ಆಟದ ಬಲದಿಂದ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 212 ರನ್‌ ಗಳಿಸಿತು. ಅವರನ್ನು ಬಿಟ್ಟರೆ ಕ್ರೀಸ್‌ಗೆ ಬಂದ ತಂಡದ ಉಳಿದ ಬ್ಯಾಟರ್‌ಗಳಲ್ಲಿ ಒಬ್ಬರೂ ಹೆಚ್ಚು ರನ್‌ ಗಳಿಸಲಿಲ್ಲ. ಈ ಐಪಿಎಲ್ ಟೂರ್ನಿಯಲ್ಲಿ ದಾಖಲಾದ ಮೂರನೇ ಶತಕ ಇದು. ಹ್ಯಾರಿ ಬ್ರೂಕ್ ಮತ್ತು ವೆಂಕಟೇಶ್ ಅಯ್ಯರ್ ಅವರ ನಂತರ ಯಶಸ್ವಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ ಒಟ್ಟು ಒಂಬತ್ತು ಪಂದ್ಯಗಳಿಂದ 428 ರನ್‌ ಪೇರಿಸಿದ ಯಶಸ್ವಿ ಆರೆಂಜ್ ಕ್ಯಾಪ್ ಕೂಡ ಧರಿಸಿದರು. ಟಾಸ್ ಗೆದ್ದ ರಾಜಸ್ಥಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಯಶಸ್ವಿ ಹಾಗೂ ಜಾಸ್ ಬಟ್ಲರ್ ಸೇರಿ ಏಳು ಓವರ್‌ಗಳಲ್ಲಿ 72 ರನ್‌ಗಳನ್ನು ಸೇರಿಸಿದರು. ಇದರಲ್ಲಿ ಬಟ್ಲರ್ ಪಾಲು ಕೇವಲ 18 ರನ್‌ಗಳು ಮಾತ್ರ. ಅದಕ್ಕಾಗಿ ಅವರು 19 ಎಸೆತಗಳನ್ನು ಆಡಿದರು. ಸಂಜು ಸ್ಯಾಮ್ಸನ್ ಹತ್ತು ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ದೇವದತ್ತ ಪಡಿಕ್ಕಲ್ (2), ಜೇಸನ್ ಹೋಲ್ಟರ್, ಹೆಟ್ಮೆಯರ್ ಮತ್ತು ಧ್ರುವ್ ಜುರೇಲ್ ಅವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ 21 ವರ್ಷದ ಯಶಸ್ವಿಯ ಏಕಾಗ್ರತೆಗೆ ಭಂಗ ಬರಲಿಲ್ಲ. ಅವರ ಬೀಸಾಟದ ವೇಗ ಕಡಿಮೆಯಾಗಲಿಲ್ಲ. 54 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಡ್ರೈವ್, ಫ್ಲಿಕ್ ಮತ್ತು ರಿವರ್ಸ್ ಸ್ವೀಪ್‌ಗಳ ಮೂಲಕ ವೇಗಿ ಜೋಫ್ರಾ ಆರ್ಚರ್, ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಗೂ ಅರ್ಷದ್ ಸೇರಿದಂತೆ ಆರು ಬೌಲರ್‌ಗಳಿಗೂ ಜೈಸ್ವಾಲ್ ಬಿಸಿ ಮುಟ್ಟಿಸಿದರು. ‌ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 212 (ಯಶಸ್ವಿ ಜೈಸ್ವಾಲ್ 124, ಜಾಸ್ ಬಟ್ಲರ್ 18, ಸಂಜು ಸ್ಯಾಮ್ಸನ್ 14, ಜೇಸನ್ ಹೋಲ್ಡರ್ 11, ಪಿಯೂಷ್ ಚಾವ್ಲಾ 34ಕ್ಕೆ2, ಅರ್ಷದ್ ಖಾನ್ 39ಕ್ಕೆ3) - - 1000 ಪಂದ್ಯ ಐಪಿಎಲ್ ಟೂರ್ನಿಯ 1000ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಮುಖಾಮುಖಿಯಾದವು. 2008ರಲ್ಲಿ ಟೂರ್ನಿಯು ಆರಂಭವಾಗಿತ್ತು. ಆಗ ಎಂಟು ತಂಡಗಳು ಇದ್ದವು. ಹೋದ ವರ್ಷ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗಿ ಒಟ್ಟು ಸಂಖ್ಯೆಯು ಹತ್ತಕ್ಕೇರಿತು. ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಐಪಿಎಲ್ ಕೂಡ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.