2023 | ರಾಜಸ್ಥಾನ ತಂಡವನ್ನು ಮಣಿಸಿದ ಮುಂಬೈ ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ಗಳಿಸಿದ ಚೊಚ್ಚಲ ಶತಕ ವ್ಯರ್ಥವಾಯಿತು. ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದ ಟಿಮ್‌ ಡೇವಿಡ್‌ ಅವರು ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು ತಂದಿತ್ತರು. ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ ಆರು ವಿಕೆಟ್‌ಗಳಿಂದ ರಾಜಸ್ಥಾನ ತಂಡವನ್ನು ಮಣಿಸಿತು. ಐಪಿಎಲ್‌ ಟೂರ್ನಿಯ 1,000ನೇ ಪಂದ್ಯ ಇದಾಗಿತ್ತು. ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 212 ರನ್‌ ಗಳಿಸಿತು. ಜೈಸ್ವಾಲ್‌ ಅವರು 62 ಎಸೆತಗಳಲ್ಲಿ 124 ರನ್‌ ಗಳಿಸಿದರು. ಎಂಟು ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಬಾರಿಸಿದರು. ಮುಂಬೈ ಇಂಡಿಯನ್ಸ್‌ ತಂಡ 19.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 214 ರನ್‌ ಗಳಿಸಿ ಗೆದ್ದಿತು. ಟಿಮ್‌ ಡೇವಿಡ್‌ (ಔಟಾಗದೆ 45 ರನ್‌, 14 ಎ., 4X2, 6X5) ಮತ್ತು ಸೂರ್ಯಕುಮಾರ್‌ ಯಾದವ್‌ (55 ರನ್‌, 29 ಎ., 4X8, 6X2) ಅವರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ತಂಡ, ನಾಯಕ ರೋಹಿತ್‌ ಶರ್ಮಾ (3) ಅವರನ್ನು ಬೇಗನೇ ಕಳೆದುಕೊಂಡಿತು. ಇಶಾನ್‌ ಕಿಶನ್‌ (28 ರನ್‌, 23 ಎ.) ಮತ್ತು ಕ್ಯಾಮರಾನ್‌ ಗ್ರೀನ್‌ (44 ರನ್‌, 26 ಎ.) ಎರಡನೇ ವಿಕೆಟ್‌ಗೆ 62 ರನ್‌ ಸೇರಿಸಿದರು. ಆ ಬಳಿಕ ಸೂರ್ಯಕುಮಾರ್‌ ಯಾದವ್‌ ಗೆಲುವಿನ ಕನಸು ಜೀವಂತವಾಗಿರಿಸಿಕೊಂಡರು. ಟ್ರೆಂಟ್ ಬೌಲ್ಟ್‌ ಬೌಲಿಂಗ್‌ನಲ್ಲಿ ಸಂದೀಪ್‌ ಶರ್ಮಾ ಅವರ ಅಮೋಘ ಕ್ಯಾಚ್‌ಗೆ ಸೂರ್ಯಕುಮಾರ್‌ ಔಟಾದರೂ, ಡೇವಿಡ್‌ ಅಬ್ಬರದ ಆಟ ಮುಂದುವರಿಸಿದರು. ತಿಲಕ್‌ ವರ್ಮಾ (ಅಜೇಯ 29, 21 ಎ.) ಜತೆ ಮುರಿಯದ ಐದನೇ ವಿಕೆಟ್‌ಗೆ 3.5 ಓವರ್‌ಗಳಲ್ಲಿ 62 ರನ್‌ ಸೇರಿಸಿ ಪಂದ್ಯವನ್ನು ರಾಯಲ್ಸ್‌ ಕೈಯಿಂದ ಕಿತ್ತುಕೊಂಡರು. ಜೇಸನ್‌ ಹೋಲ್ಡರ್‌ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿ ಗೆಲುವಿಗೆ 17 ರನ್‌ಗಳು ಬೇಕಿದ್ದವು. ಮೊದಲ ಮೂರೂ ಎಸೆತಗಳನ್ನು ಡೇವಿಡ್‌ ಸಿಕ್ಸರ್‌ಗೆ ಅಟ್ಟಿ, ಮುಂಬೈ ಪಾಳೆಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ಜೈಸ್ವಾಲ್‌ ಶತಕ ಸಂಭ್ರಮ: ರಾಯಲ್ಸ್‌ ಪರ ಜೈಸ್ವಾಲ್‌ ಅವರನ್ನು ಬಿಟ್ಟರೆ ಕ್ರೀಸ್‌ಗೆ ಬಂದ ಉಳಿದ ಬ್ಯಾಟರ್‌ಗಳಲ್ಲಿ ಒಬ್ಬರೂ ಹೆಚ್ಚು ರನ್‌ ಗಳಿಸಲಿಲ್ಲ. ಜೈಸ್ವಾಲ್‌ ಈ ಐಪಿಎಲ್ ಟೂರ್ನಿಯಲ್ಲಿ ಶತಕ ಗಳಿಸಿದ ಮೂರನೇ ಆಟಗಾರ ಎನಿಸಿದರು. ಹ್ಯಾರಿ ಬ್ರೂಕ್ ಮತ್ತು ವೆಂಕಟೇಶ್ ಅಯ್ಯರ್ ಅವರ ನಂತರ ಈ ಸಾಧನೆ ಮಾಡಿದ್ದಾರೆ. ಆರಂಭಿಕ ಜೋಡಿ ಯಶಸ್ವಿ ಹಾಗೂ ಜಾಸ್ ಬಟ್ಲರ್ ಸೇರಿ ಏಳು ಓವರ್‌ಗಳಲ್ಲಿ 72 ರನ್‌ಗಳನ್ನು ಸೇರಿಸಿದರು. ಇದರಲ್ಲಿ ಬಟ್ಲರ್ ಪಾಲು ಕೇವಲ 18 ರನ್‌ಗಳು ಮಾತ್ರ. ಅದಕ್ಕಾಗಿ ಅವರು 19 ಎಸೆತಗಳನ್ನು ಆಡಿದರು. ಸಂಜು ಸ್ಯಾಮ್ಸನ್ ಹತ್ತು ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ದೇವದತ್ತ ಪಡಿಕ್ಕಲ್ (2), ಜೇಸನ್ ಹೋಲ್ಟರ್, ಹೆಟ್ಮೆಯರ್ ಮತ್ತು ಧ್ರುವ್ ಜುರೇಲ್ ಅವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ 21 ವರ್ಷದ ಯಶಸ್ವಿಯ ಏಕಾಗ್ರತೆಗೆ ಭಂಗ ಬರಲಿಲ್ಲ. ಅವರ ಬೀಸಾಟದ ವೇಗ ಕಡಿಮೆಯಾಗಲಿಲ್ಲ. 54 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಡ್ರೈವ್, ಫ್ಲಿಕ್ ಮತ್ತು ರಿವರ್ಸ್ ಸ್ವೀಪ್‌ಗಳ ಮೂಲಕ ವೇಗಿ ಜೋಫ್ರಾ ಆರ್ಚರ್, ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಗೂ ಅರ್ಷದ್ ಸೇರಿದಂತೆ ಆರು ಬೌಲರ್‌ಗಳಿಗೂ ಜೈಸ್ವಾಲ್ ಬಿಸಿ ಮುಟ್ಟಿಸಿದರು. ‌ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 212 (ಯಶಸ್ವಿ ಜೈಸ್ವಾಲ್ 124, ಜಾಸ್ ಬಟ್ಲರ್ 18, ಸಂಜು ಸ್ಯಾಮ್ಸನ್ 14, ಪಿಯೂಷ್ ಚಾವ್ಲಾ 34ಕ್ಕೆ2, ಅರ್ಷದ್ ಖಾನ್ 39ಕ್ಕೆ3) ಮುಂಬೈ ಇಂಡಿಯನ್ಸ್‌ 19.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 214 (ಇಶಾನ್‌ ಕಿಶನ್‌ 28, ಕ್ಯಾಮರಾನ್‌ ಗ್ರೀನ್‌ 44, ಸೂರ್ಯಕುಮಾರ್‌ ಯಾದವ್‌ 55, ತಿಲಕ್‌ ವರ್ಮಾ ಔಟಾಗದೆ 29, ಟಿಮ್‌ ಡೇವಿಡ್‌ ಔಟಾಗದೆ 45, ಆರ್‌.ಅಶ್ವಿನ್‌ 27ಕ್ಕೆ 2) ಫಲಿತಾಂಶ: ಮುಂಬೈಗೆ 6 ವಿಕೆಟ್‌ ಗೆಲುವು ಐಪಿಎಲ್ ಟೂರ್ನಿಯ 1000ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಮುಖಾಮುಖಿಯಾದವು. 2008ರಲ್ಲಿ ಟೂರ್ನಿಯು ಆರಂಭವಾಗಿತ್ತು. ಆಗ ಎಂಟು ತಂಡಗಳು ಇದ್ದವು. ಹೋದ ವರ್ಷ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗಿ ಒಟ್ಟು ಸಂಖ್ಯೆಯು ಹತ್ತಕ್ಕೇರಿತು. ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಐಪಿಎಲ್ ಕೂಡ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.