ಪಾನಿಪುರಿ ಮಾರಾಟದಿಂದ ಐಪಿಎಲ್‌ ಹೀರೋ ತನಕ: ಇದು ಯಶಸ್ವಿ ಜೈಸ್ವಾಲ್ ಜೀವನದ ಕತೆ ಯಶಸ್ವಿ ಜೈಸ್ವಾಲ್‌... ಈ ಹೆಸರು ಮುಂದೊಂದು ದಿನ ಕ್ರಿಕೆಟ್‌ ಜಗತ್ತನ್ನು ಆಳುವ ಮುನ್ಸೂಚನೆಯೊಂದು ಸಿಕ್ಕಿದೆ. 5.6 ಅಡಿ ಉದ್ದದ ಈ ಎಡಗೈ ಬ್ಯಾಟರ್‌ ತನಗೆ ಜೀವನ ಕೊಟ್ಟ ಮುಂಬೈ ಎಂಬ ಮಾಯಾ ನಗರಿಯ ಮೈದಾನದಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆಗರೆಯುವಾಗ, ಈತ ಭಾರತದ ಕ್ರಿಕೆಟ್‌ ತಂಡದ ಭವಿಷ್ಯದ ತಾರೆ ಎಂದು ಹಲವು ಮಂದಿ ಮನದಲ್ಲಿಯೇ ಅಂದುಕೊಂಡು ಬಿಟ್ಟಿದ್ದರು. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಯಶಸ್ವಿ ಜೈಸ್ವಾಲ್‌, ಮುಂಬೈ ಇಂಡಿಯನ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 62 ಎಸೆತಗಳಲ್ಲಿ 124 ರನ್‌ ಗಳಿಸಿದರು. ಇದು ಈ ವರ್ಷದ ಐಪಿಎಲ್‌ ಟೂರ್ನಿಯ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಚೆಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದ ಯಶಸ್ವಿ ಜೈಸ್ವಾಲ್‌ ಅವರ ಆಟದ ಹಿಂದೆ ನಿರಂತರ ಪರಿಶ್ರಮವಿದೆ. ಛಲ ಬಿಡದ ಪ್ರಯತ್ನಗಳಿವೆ. ನಿದ್ದೆ ಇಲ್ಲದ ರಾತ್ರಿಗಳಿವೆ. ತನ್ನೊಳಗಿನ ನೋವೆಲ್ಲಾ ಬ್ಯಾಟ್‌ನಿಂದ ಸಿಡಿದು ಮೈದಾನದ ಮೂಲೆ ಮೂಲೆಗೆ ಹೋಗುವಂತೆ ಭಾಸವಾಗುತ್ತಿತ್ತು ಯಶಸ್ವಿ ಆಡಿದ ಆಟ. ಜೈಸ್ವಾಲ್‌ ಹುಟ್ಟಿದ್ದು., ಉತ್ತರ ಪ್ರದೇಶದ ಭಡೋಹಿಯ ಸೂರಿಯವಾನ್ ಎಂಬ ಗ್ರಾಮದಲ್ಲಿ. ಕ್ರಿಕೆಟ್‌ ಅನ್ನೇ ಉಸಿರಾಗಿಸಿಕೊಂಡ ಜೈಸ್ವಾಲ್‌, ಹುಟ್ಟೂರು, ಹೆತ್ತವರು, ಒಡಹುಟ್ಟಿದವರನ್ನು ಬಿಟ್ಟು ಮಾಯಾನಗರಿಗೆ ಬಂದಾಗ ಕೇವಲ 11 ವರ್ಷ. ಡೈರಿಯೊಂದರಲ್ಲಿ ಉಳಿದುಕೊಂಡಿದ್ದ ಜೈಸ್ವಾಲ್‌ಗೆ ಬಳಿಕ ಆತನ ಚಿಕ್ಕಪ್ಪ ಕೆಲ ದಿನಗಳ ಕಾಲ ಆಶ್ರಯ ಕೊಟ್ಟಿದ್ದರು. ಆಸೆಗಣ್ಣಿನಿಂದ ಮುಂಬೈಗೆ ಬಂದಿದ್ದ ಹುಡುಗನಿಗೆ ನಿರಾಸೆ, ಹತಾಶೆ. ಆದರೆ ಒಳಗಿದ್ದ ಕ್ರಿಕೆಟ್‌ ಕಿಚ್ಚು ಬಿಡಬೇಕಲ್ಲ. ಸೋತು ಮತ್ತೆ ಊರಿಗೆ ಹೋಗುವುದೇ ಇಲ್ಲ ಎಂದು ನಿರ್ಧಾರ ಮಡಿಬಿಟ್ಟ. ‘ಮುಂಬೈನ ಆಜಾದ್ ಮೈದಾನದದಲ್ಲಿ ಟೆಂಟ್‌ ಹಾಕಿಕೊಂಡು ಅಲ್ಲೇ ಮಲಗಲು ಶುರು ಮಾಡಿದೆ. ದಿನವಿಡೀ ಕ್ರಿಕೆಟ್‌ಗಾಗಿ ಮೀಸಲಿಟ್ಟೆ. ಅದೇ ವೇಳೆಯಲ್ಲಿ ಪಾನಿಪುರಿ ಅಂಗಡಿಯೊಂದರಲ್ಲಿ ಕೆಲಸ ಮಾಡಲು ಶುರುಮಾಡಿದೆ. ಇದರಿಂದಾಗಿ ಕೆಲವು ಹಣ ಸಂಪಾದಿಸಿದೆ‘ ಎಂದು ಜೈಸ್ವಾಲ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಾಂತಾಕ್ರೂಸ್‌ನಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸುವ ಜ್ವಾಲಾ ಸಿಂಗ್ ಎಂಬ ಕೋಚ್ ಕಣ್ಣಿಗೆ ಅದೇಗೋ ಜೈಸ್ವಾಲ್‌ ಬಿದ್ದು ಬಿಟ್ಟ. ಆನಂತರ ಆತನ ನಸೀಬು ಬದಲಾಗಿ ಬಿಟ್ಟಿತು. ಅವಕಾಶಗಳು ಬರಲಾರಂಭಿಸಿದವು. ಮುಂಬೈ ರಾಜ್ಯ ತಂಡಕ್ಕೆ ಆಯ್ಕೆಯಾದ. 17 ವರ್ಷ 292 ದಿನದ ಹುಡುಗ ದ್ವಿಶತಕ ಬಾರಿಸಿ ಗಮನ ಸೆಳೆದ. 2019ರಲ್ಲಿ ರಾಜಸ್ಥಾನ ರಾಯಲ್ಸ್‌ ಪಾಲಾದ. 2020ರ ಅಂಡರ್‌–19 ವಿಶ್ವಕ‍ಪ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ. ಐಪಿಎಲ್‌ನಲ್ಲಿ ಖ್ಯಾತನಾಮ ಆಟಗಾರರ ಪರಿಚಯವಾಯ್ತು. ಬ್ಯಾಟ್ ಮತ್ತಷ್ಟು ಮೊನಚಾಯ್ತು. ಲೀಲಾಜಾಲವಾಗಿ ಆಡುವ ಜೈಸ್ವಾಲ್‌ ಮುಂದೊಂದು ದಿನ ಭಾರತ ಕ್ರಿಕೆಟ್‌ ತಂಡದ ತಾರೆಯಾಗಬಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.