2023 | ಡೆಲ್ಲಿಗೆ ’ಮಾಡು–ಮಡಿ‘ ಪಂದ್ಯ ಅಹಮದಾಬಾದ್: ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರ ಇಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್‌ ವಿರುದ್ಧ ಆಡಲಿದೆ. ಈ ಪಂದ್ಯ ಗೆದ್ದರಷ್ಟೇ ಡೆಲ್ಲಿ ತಂಡಕ್ಕೆ ಪ್ಲೇ ಆಫ್‌ಗೆ ಸ್ಥಾನ ಪಡೆಯುವ ಗುಟುಕು ಅವಕಾಶ ಜೀವಂತವಾಗಿ ಇರಲಿದೆ. ಅನುಭವಿಗಳಾದ ಪ್ರಥ್ವಿ ಶಾ ಮತ್ತು ಸರ್ಫರಾಜ್ ಖಾನ್‌ ಸತತವಾಗಿ ವಿಫಲರಾಗುತ್ತಿರುವುದು ದೆಹಲಿ ತಂಡದ ದುರ್ದೆಸೆಗೆ ಕಾರಣವಾಗಿದೆ. ಎಂಟು ಪಂದ್ಯಗಳಲ್ಲಿ ಆರನ್ನು ಸೋತಿರುವ ಡೇವಿಡ್‌ ವಾರ್ನರ್ ಬಳಗ ಈಗ ‘ಮಾಡು ಇಲ್ಲ ಮಡಿ’ ಪರಿಸ್ಥಿತಿ ಎದುರಿಸುತ್ತಿದೆ. ಆದರೆ ತಂಡದ ಈಗಿನ ನಿರ್ವಹಣೆ ನೋಡಿದರೆ ಪ್ಲೇ ಆಫ್‌ ಅವಕಾಶ ಮರೀಚಿಕೆಯಂತೆ ಕಂಡುಬರುತ್ತಿದೆ. ಪ್ರಥ್ವಿ ಅವರ ಕಳಪೆ ಪ್ರದರ್ಶನದಿಂದಾಗಿ, ಈ ಹಿಂದಿನ ಪಂದ್ಯದಲ್ಲಿ ವಾರ್ನರ್ ಜೊತೆ ಫಿಲ್ ಸಾಲ್ಟ್ ಅವರಿಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ದೊರಕಿತ್ತು. ಹೈದರಾಬಾದ್ ವಿರುದ್ಧದ ಆ ಪಂದ್ಯದಲ್ಲಿ ಅವರು ಅದನ್ನು ಚೆನ್ನಾಗಿ ಬಳಸಿ ಅರ್ಧ ಶತಕ ದಾಖಲಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಮಿಚೆಲ್‌ ಮಾರ್ಷ್ ಕೂಡ ಲಯ ಕಂಡುಕೊಂಡಿದ್ದು, ಬೌಲಿಂಗ್‌ನಲ್ಲೂ ಕೈಚಳಕ ತೋರಿದ್ದರು. ಪ್ರಿಯಂ ಗರ್ಗ್ ಕೊಟ್ಟ ಅವಕಾಶಗಳಲ್ಲಿ ಮಿಂಚಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಕೂಡ ಸ್ಥಿರ ನಿರ್ವಹಣೆ ನೀಡುತ್ತಿಲ್ಲ. ಕೆಳ ಕ್ರಮಾಂಕದಲ್ಲಿ ಆಡಲು ಬಂದು ಗಮನಾರ್ಹ ಕೊಡುಗೆ ನೀಡುತ್ತಿರುವ ಅಕ್ಷರ್ ಪಟೇಲ್‌ ಅವರಿಗೆ ವಾರ್ನರ್ ಅವರು ಐದನೇ ಕ್ರಮಾಂಕಕ್ಕೆ ಬಡ್ತಿ ನೀಡುವ ಸಾಧ್ಯತೆಯಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಅವರು ಉಪಯುಕ್ತ ಇನಿಂಗ್ಸ್‌ ಆಡಿದ್ದಾರೆ. ಆದರೆ ಬೌಲಿಂಗ್‌ ವಿಭಾಗ ಬ್ಯಾಟಿಂಗ್‌ನಷ್ಟು ಸೊರಗಿಲ್ಲ. ಹಳೆಯ ಹುಲಿ ಇಶಾಂತ್ ಶರ್ಮಾ ಪರಿಣಾಮಕಾರಿ ಆಗಿದ್ದಾರೆ. ಆ್ಯನ್ರಿಚ್‌ ನಾಕಿಯಾ ಅವರಿಂದ ತಂಡ ಸುಧಾರಿತ ಪ್ರದರ್ಶನ ನಿರೀಕ್ಷಿಸುತ್ತಿದೆ. ಮುಕೇಶ್ ಕುಮಾರ್ ಓವರೊಂದಕ್ಕೆ 11 ರನ್‌ ನೀಡುತ್ತಿರುವುದು ಆ ತಂಡಕ್ಕೆ ಕಳವಳಕಾರಿ ವಿಚಾರ. ಇನ್ನೊಂದೆಡೆ ಗುಜರಾತ್ ಟೈಟನ್ಸ್ ವಿಶ್ವಾಸದಲ್ಲಿದೆ. ಯಾವುದೇ ಸಂದರ್ಭದಲ್ಲೂ ಹಿನ್ನಡೆಯಿಂದ ಪುಟಿದೇಳುವ ಸಾಮರ್ಥ್ಯ ಹಾರ್ದಿಕ್‌ ಪಾಂಡ್ಯ ಬಳಗಕ್ಕಿದೆ. ಕೋಲ್ಕತ್ತ ವಿರುದ್ಧ ತೊಂದರೆಯಲ್ಲಿದ್ದಂತೆ ಕಂಡರೂ ಅಂತಿಮವಾಗಿ 13 ಎಸೆತಗಳಿರುವಂತೆ ಗೆದ್ದ ತಂಡ ಎಂಟು ಪಂದ್ಯಗಳಲ್ಲಿ ಆರನೇ ಜಯ ದಾಖಲಿಸಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೇವಿಡ್‌ ಮಿಲ್ಲರ್‌ ಅವರ ಜೊತೆ ವಿಜಯ್ ಶಂಕರ್ ಅವರೂ ಅತ್ಯುತ್ತಮ ಇನಿಂಗ್ಸ್ ಕಟ್ಟಿದ್ದರು. ಈ ಋತುವಿನಲ್ಲಿ ಹಾಲಿ ಚಾಂಪಿಯನ್ನರ ಆಟ ಗಮನಸೆಳೆದಿದೆ. ಅದು ಯಾರೊಬ್ಬರನ್ನು ಬಲವಾಗಿ ನೆಚ್ಚಿಕೊಂಡಿಲ್ಲ. ತಂಡದ ಸ್ಪಿನ್‌ ವಿಭಾಗ ಬಲವಾಗಿದ್ದು ರಶೀದ್ ಖಾನ್ ಜೊತೆ ಅಫ್ಗಾನಿಸ್ಥಾನದ ಇನ್ನೊಬ್ಬ ಬೌಲರ್ ನೂರ್ ಅಹ್ಮದ್ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ನೂರ್‌ ಅಹ್ಮದ್ ನಾಲ್ಕು ಪಂದ್ಯಗಳಿಂದ ಎಂಟು ವಿಕೆಟ್‌ಗಳನ್ನು (ಇಕಾನಮಿ: 7.33) ಗಳಿಸಿದ್ದಾರೆ. ಪಂದ್ಯ ಆರಂಭ: ರಾತ್ರಿ 7.30. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.