ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಭಾರತಕ್ಕೆ ಅಗ್ರಸ್ಥಾನ ದುಬೈ: ಭಾರತ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಪ್ರಕಟಿಸಿರುವ ವಾರ್ಷಿಕ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿದೆ. ಭಾರತ ತಂಡವು ಒಟ್ಟು 121 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಈ ಹಾದಿಯಲ್ಲಿ ಆಸ್ಟ್ರೇಲಿಯಾ (116) ಹಾಗೂ ಇಂಗ್ಲೆಂಡ್ (114) ತಂಡಗಳನ್ನು ಹಿಂದಿಕ್ಕಿದೆ. 2020ರ ಮೇ ತಿಂಗಳಿಂದ 2022ರ ಮೇ ವರೆಗೆ ಪೂರ್ಣಪ್ರಮಾಣದಲ್ಲಿ ನಡೆದ ಟೆಸ್ಟ್ ಸರಣಿಗಳ ಫಲಿತಾಂಶಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಗಿದೆ. ಇದರಿಂದಾಗಿ 2019–20ರ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡವು ತನ್ನ ತವರಿನಲ್ಲಿ ಪಾಕಿಸ್ತಾನ (2–0) ಹಾಗೂ ನ್ಯೂಜಿಲೆಂಡ್ (3–0) ಎದುರು ಸರಣಿ ಜಯಿಸಿದ್ದು ಪರಿಗಣಿಸಲಾಗಿಲ್ಲ. ಅಲ್ಲದೇ 2020ರ ಮಾರ್ಚ್‌ನಲ್ಲಿ ಭಾರತವೂ ನ್ಯೂಜಿಲೆಂಡ್ ಎದುರು ಸೋತಿದ್ದ ಸರಣಿಯೂ ಪರಿಗಣಿತವಾಗಿಲ್ಲ. ಇದರಿಂದಾಗಿ ಆಸ್ಟ್ರೇಲಿಯಾಕ್ಕೆ ರೇಟಿಂಗ್ ಪಾಯಿಂಟ್‌ಗಳು ಕಡಿಮೆಯಾದವು. 2021–22ರಲ್ಲಿ ಆಸ್ಟ್ರೇಲಿಯಾ ತಂಡವು 4–0ಯಿಂದ ಇಂಗ್ಲೆಂಡ್ ವಿರುದ್ಧ ಗೆದ್ದಿತ್ತು. ಇಂಗ್ಲೆಂಡ್ ತಂಡವು ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಆ್ಯಷಸ್ ಸರಣಿಯಲ್ಲಿ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಸರಣಿಗಳನ್ನು ಸೋತಿತ್ತು. ಹತ್ತನೇ ಸ್ಥಾನದಲ್ಲಿರುವ ಜಿಂಬಾಬ್ವೆ ತಂಡವು ಐದು ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದೆ. ಪುರುಷರ ಟಿ20 ತಂಡ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡವು ಅಗ್ರಸ್ಥಾನ (267 ರೇಟಿಂಗ್ ಪಾಯಿಂಟ್ಸ್) ಗಳಿಸಿದೆ. ಇಂಗ್ಲೆಂಡ್ (259) ಹಾಗೂ ನ್ಯೂಜಿಲೆಂಡ್ (256 ) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.