2023 | ಚೆನ್ನೈ–ಲಖನೌ ಪಂದ್ಯಕ್ಕೆ ಮಳೆ ಅಡ್ಡಿ ಲಖನೌ : ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡಿತು. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು. ಆದರೆ, ಲಖನೌ ತಂಡದ ಆಯುಷ್ ಬಡೋಣಿಯ ಅರ್ಧಶತಕ ಕ್ರಿಕೆಟ್‌ ಅಭಿಮಾನಿಗಳಿಗೆ ಮುದ ನೀಡಿತು. ಬುಧವಾರ ಬೆಳಿಗ್ಗೆ ಸುರಿದಿದ್ದ ಮಳೆಯಿಂದಾಗಿ ಮೈದಾನ ಹಸಿಯಾಗಿತ್ತು. ಅದರಿಂದಾಗಿ 15 ನಿಮಿಷ ತಡವಾಗಿ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೋಯಿನ್ ಅಲಿ, ಮಹೀಷ ತೀಕ್ಷಣ ಮತ್ತು ಮಹೀಷ ಪಥಿರಾಣಾ ಅವರು ಉತ್ತಮ ಬೌಲಿಂಗ್ ಮಾಡಿದರು. ಇದರಿಂದಾಗಿ ತಂಡವು ಕೇವಲ 44 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಆದರೆ ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಯುವ ಬ್ಯಾಟರ್ ಆಯುಷ್ ಬಡೋಣಿ (ಔಟಾಗದೆ 59; 33ಎ, 4X2, 6X4) ಲಖನೌ ತಂಡಕ್ಕೆ ಆಸರೆಯಾದರು. ನಿಕೊಲಸ್ ಪೂರನ್ 31 ಎಸೆತಗಳಲ್ಲಿ 20 ರನ್ ಗಳಿಸಿದರು. ತಂಡವು 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 125 ರನ್ ಗಳಿಸಿದ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಸಂಕ್ಷಿಪ್ತ ಸ್ಕೋರ್‌: ಲಖನೌ ಸೂಪರ್ ಜೈಂಟ್ಸ್ 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 125 (ಮನನ್ ವೊಹ್ರಾ 10, ಕೈಲ್ ಮೇಯರ್ಸ್ 14, ನಿಕೊಲಸ್ ಪೂರನ್ 20, ಆಯುಷ್ ಬಡೋಣಿ ಅಜೇಯ 59, ಮೋಯಿನ್ ಅಲಿ 13ಕ್ಕೆ2, ಮಹೀಷ ತೀಕ್ಷಣ 37ಕ್ಕೆ2, ಮಹೀಷ ಪಥಿರಾಣ 22ಕ್ಕೆ2) ಮಳೆಯಿಂದಾಗಿ ಪಂದ್ಯ ಸ್ಥಗಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.