ಐಪಿಎಲ್‌ನಿಂದ ರಾಹುಲ್, ಉನದ್ಕತ್ ಹೊರಗೆ? ನವದೆಹಲಿ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅವರು ಐಪಿಎಲ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನ. ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಪಂದ್ಯದಲ್ಲಿ ಅವರು ಫೀಲ್ಡಿಂಗ್ ಮಾಡುವಾಗ ಬಲತೊಡೆಯ ಸ್ನಾಯುಸೆಳೆತದಿಂದ ಬಳಲಿದ್ದರು. ಈ ಗಾಯವು ಗಂಭೀರವಾಗಿದ್ದು, ಮುಂಬೈನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ತಂಡದ ಅನುಭವಿ ಮಧ್ಯಮವೇಗಿ ಜೈದೇವ್ ಉನದ್ಕತ್ ಅವರೂ ಭುಜದ ಗಾಯದಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಮುಂದಿನ ತಿಂಗಳು 7ರಿಂದ 11ರವರೆಗೆ ದಿ ಒವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಆಡಲು ರಾಹುಲ್ ಅವರನ್ನು ಸಜ್ಜುಗೊಳಿಸುವ ಸವಾಲು ಬಿಸಿಸಿಐ ಮುಂದೆ ಇದೆ. ’ಸದ್ಯ ರಾಹುಲ್ ಅವರು ತಂಡದೊಂದಿಗೆ ಇದ್ದಾರೆ. ಗುರುವಾರ ಅವರು ಮುಂಬೈಗೆ ತೆರಳುವರು. ರಾಹುಲ್ ಮತ್ತು ಜೈದೇವ್ ಅವರ ಚಿಕಿತ್ಸೆಯ ನಿರ್ವಹಣೆಯನ್ನು ಬಿಸಿಸಿಐ ನೋಡಿಕೊಳ್ಳಲಿದೆ‘ ಎಂದು ಮೂಲಗಳು ತಿಳಿಸಿವೆ. ಡಬ್ಲ್ಯುಟಿಸಿ ಫೈನಲ್‌ಗೆ ತೆರಳುವ ಕುರಿತು ಈಗಲೇ ಏನೂ ಹೇಳಲಾಗದು. ರಾಹುಲ್ ಫಿಟ್‌ ನೆಸ್ ಬಗ್ಗೆ ವೈದ್ಯಕೀಯ ತಂಡವು ನೀಡುವ ವರದಿಯ ನಂತರವಷ್ಟೇ ನಿರ್ಧರಿಸಲಾಗುವುದು ಎಂದೂ ಮೂಲಗಳು ತಿಳಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.