2023 | ಲಿಯಾಮ್, ಜಿತೇಶ್ ಶತಕದ ಜೊತೆಯಾಟ ಮೊಹಾಲಿ : ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರ ಶತಕದ ಜೊತೆಯಾಟದಿಂದಾಗಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್‌ಗೆ ಬೃಹತ್ ಮೊತ್ತದ ಗುರಿಯೊಡ್ಡಿತು. ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 214 ರನ್‌ ಗಳಿಸಿತು. ಲಿಯಾಮ್ (ಅಜೇಯ 82; 47ಎ) ಮತ್ತು ಜಿತೇಶ್ (ಅಜೇಯ 49; 27ಎ) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 119 ರನ್‌ ಸೇರಿಸಿದರು. ಇದಕ್ಕಾಗಿ ಅವರಿಬ್ಬರೂ ಆಡಿದ್ದು 53 ಎಸೆತಗಳನ್ನು ಮಾತ್ರ! ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಮುಂಬೈ ಬೌಲರ್‌ಗಳು ವಿಜೃಂಭಿಸಿದರು. ಅರ್ಷದ್ ಖಾನ್ ಹಾಕಿದ ಎರಡನೇ ಓವರ್‌ನಲ್ಲಿ ಪ್ರಭಸಿಮ್ರನ್ ಸಿಂಗ್ ಕ್ಯಾಚ್ ಪಡೆದ ವಿಕೆಟ್‌ ಕೀಪರ್ ಇಶಾನ್ ಕಿಶನ್ ಸಂಭ್ರಮಿಸಿದರು. ಇನ್ನೊಂದು ಬದಿಯಲ್ಲಿದ್ದ ನಾಯಕ ಶಿಖರ್ ಧವನ್ (30; 20ಎ) ಐದು ಬೌಂಡರಿಗಳನ್ನು ಹೊಡೆದು ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಕಾರ್ತಿಕೇಯ ಹಾಕಿದ ಏಳನೇ ಓವರ್‌ನಲ್ಲಿ ಫೀಲ್ಡರ್ ಜೋಫ್ರಾ ಆರ್ಚರ್ ಕೈಚೆಲ್ಲಿದ ಕ್ಯಾಚ್‌ನಿಂದಾಗಿ ಶಿಖರ್‌ಗೆ ಜೀವದಾನ ದೊರೆಯಿತು. ಇದರಿಂದಾಗಿ ಶಿಖರ್ ಅವರು ಮ್ಯಾಥ್ಯೂ ಶಾರ್ಟ್‌ (27; 26ಎ) ಅವರೊಂದಿಗೆ ಜೊತೆಯಾಟ ಕುದುರಿಸುವ ಹಂತದಲ್ಲಿದ್ದರು. ಸ್ಪಿನ್ನರ್ ಪೀಯೂಷ್ ಚಾವ್ಲಾ ಇದಕ್ಕೆ ಆಸ್ಪದ ನೀಡಲಿಲ್ಲ. ಎಂಟನೇ ಓವರ್‌ನಲ್ಲಿ ಶಿಖರ್ ವಿಕೆಟ್ ಕಬಳಿಸಿದ ಚಾವ್ಲಾ, 12ನೇ ಓವರ್‌ನಲ್ಲಿ ಮ್ಯಾಥ್ಯೂ ಶಾರ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರಿಂದಾಗಿ ತಂಡವು ನೂರರ ಗಡಿ ಮುಟ್ಟುವ ಮುನ್ನವೇ ಸಂಕಷ್ಟಕ್ಕೊಳಗಾಯಿತು. ಆದರೆ ಲಿಯಾಮ್ ಮತ್ತು ಜಿತೇಶ್ ಈ ಆತಂಕವನ್ನು ದೂರ ಮಾಡಿದರು. ಇನಿಂಗ್ಸ್‌ನ ಚಿತ್ರಣವನ್ನೇ ಬದಲಿಸಿಬಿಟ್ಟರು. ಅದರಲ್ಲೂ ಕೊನೆಯ ಐದು ಓವರ್‌ಗಳಲ್ಲಿ ಇವರಿಬ್ಬರ ಅಬ್ಬರಕ್ಕೆ ಕೊನೆಯ ಐದು ಓವರ್‌ಗಳಲ್ಲಿ 69 ರನ್‌ ಸೇರಿದವು. ಅದರಲ್ಲಿ ಜೋಫ್ರಾ ಹಾಕಿದ 19ನೇ ಓವರ್‌ ಒಂದರಲ್ಲಿಯೇ 27 ರನ್‌ಗಳನ್ನು ಬ್ಯಾಟರ್‌ಗಳು ಸೂರೆ ಮಾಡಿದರು. ಲಿವಿಂಗ್‌ಸ್ಟೋನ್ ಮೂರು ಸಿಕ್ಸರ್ ಹೊಡೆದರು. ಲಿಯಾಮ್ ಅವರ ಚುರುಕಾದ ಪದಚಲನೆ ಮತ್ತು ಪುಲ್, ಕಟ್, ಡ್ರೈವ್‌ಗಳ ಆಟವು ಮನಮೋಹಕವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.