ಸನ್‌ರೈಸರ್ಸ್‌ಗೆ ಕೋಲ್ಕತ್ತದ ಕಠಿಣ ಸವಾಲು ಹೈದರಾಬಾದ್: ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುರುವಾರ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪ್ಲೇ ಆಫ್‌ ಪ್ರವೇಶದ ಹಾದಿ ಎರಡೂ ತಂಡಗಳಿಗೂ ಕಠಿಣವಾಗಿದೆ. ಸನ್‌ರೈಸರ್ಸ್ ತಂಡವು ಆಡಿರುವ ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಐದರಲ್ಲಿ ಸೋತಿದೆ. ಕೋಲ್ಕತ್ತ ಒಂಬತ್ತು ಪಂದ್ಯಗಳನ್ನು ಆಡಿದೆ. ಅದರಲ್ಲಿ ಮೂರರಲ್ಲಿ ಜಯಿಸಿ ಆರು ಪಂದ್ಯಗಳನ್ನು ಸೋತಿದೆ. ಉಭಯ ತಂಡಗಳು ತಲಾ ಆರು ಅಂಕ ಗಳಿಸಿವೆ. ಏಡನ್ ಮರ್ಕರಂ ನಾಯಕತ್ವದ ಹೈದರಾಬಾದ್ ತಂಡವು ತನ್ನ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತ್ತು. ಆ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ ಗಳಿಸಿ ಉತ್ತಮ ಆರಂಭ ನೀಡಿದ್ದರು. ಕೆಳಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್ ಕೊನೆಯ ಹಂತದ ಓವರ್‌ಗಳಲ್ಲಿ ಅಬ್ಬರಿಸಿ ಅರ್ಧಶತಕ ಗಳಿಸಿದ್ದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತ್ತು. ಆದರೆ ಮಯಂಕ್ ಅಗರವಾಲ್ ಇನ್ನೂ ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಹೈದರಾಬಾದ್ ಜಯಿಸಿತ್ತು. ಇಲ್ಲಿಯೂ ಜಯಿಸುವ ವಿಶ್ವಾಸದಲ್ಲಿದೆ. ಕೋಲ್ಕತ್ತ ತಂಡವೂ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ತಂಡದ ಎಡಗೈ ಮಧ್ಯಮವೇಗಿ ಟಿ. ನಟರಾಜನ್, ಭುವನೇಶ್ವರ್ ಕುಮಾರ್, ಅಕೀಲ್ ಹುಸೇನ್ ಅವರು ಉತ್ತಮ ಬೌಲಿಂಘ್ ಮಾಡಿದ್ದರು. ಆದರೆ ಉಮ್ರಾನ್ ಮಲಿಕ್ ಕೇವಲ ಒಂದು ಓವರ್‌ ಹಾಕಿ 22 ರನ್‌ ಕೊಟ್ಟಿದ್ದರು. ಇದರಿಂದಾಗಿ ಸನ್‌ರೈಸರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಹಾಗೂ ಬೌಲಿಂಗ್ ಪಡೆಯು ಕೋಲ್ಕತ್ತ ಎದುರು ಸಫಲವಾಗುವುದು ಮುಖ್ಯವಾಗಿದೆ. ಏಕೆಂದರೆ; ಕೋಲ್ಕತ್ತ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ನಿತೀಶ್ ರಾಣಾ ನಾಯಕತ್ವದ ತಂಡದಲ್ಲಿ ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಆಲ್‌ರೌಂಡರ್ ಶಾರ್ದೂಲ್ ಠಾಕೂರ್, ಸುನೀಲ್ ನಾರಾಯಣ್ ಅವರು ರನ್‌ ಗಳಿಸುವಲ್ಲಿ ನಿಷ್ಣಾತರು. ತಂಡದ ಬೌಲಿಂಗ್ ವಿಭಾಗವು ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ, ಸುಯಶ್ ಶರ್ಮಾ ಮತ್ತು ವೇಗಿ ಉಮೇಶ್ ಯಾದವ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕೋಲ್ಕತ್ತ ತಂಡವು ಇನ್ನೂ ಐದು ಪಂದ್ಯಗಳನ್ನು ಆಡಬೇಕಿದೆ. ಈ ಎಲ್ಲ ಪಂದ್ಯಗಳಲ್ಲಿಯೂ ಜಯಿಸಿದರೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಒಲಿಯಬಹುದು. ಅದರಿಂದಾಗಿ ಪ್ರತಿ ಪಂದ್ಯವೂ ಈ ತಂಡಕ್ಕೆ ಒತ್ತಡದ್ದೇ ಆಗಿದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.