2023 | ಗುಜರಾತ್‌ ಟೈಟನ್ಸ್ ವಿರುದ್ಧ 118 ರನ್‌ಗೆ ಕುಸಿದ ರಾಜಸ್ಥಾನ ರಾಯಲ್ಸ್ ಜೈಪುರ: ಇಲ್ಲಿನ ಸವಾಯ್‌ ಮಾನಸಿಂಗ್‌ ಮೈದಾನದಲ್ಲಿ ನಡೆಯುತ್ತಿರುವ ಗುಜರಾತ್‌ ಟೈಟನ್ಸ್‌ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಅಲ್ಪ ಮೊತ್ತಕ್ಕೆ ಕುಸಿದಿದೆ. 118 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು ನಿರಾಶಾಯದಾಯಕ ಪ್ರದರ್ಶನ ನೀಡಿದೆ. ತವರು ನೆಲದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಯಲ್ಸ್‌, 11 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್‌ 8 ರನ್‌ಗೆ ಔಟಾದರು. ನಂತರ ಬಂದ ನಾಯಕ ಸಂಜು ಸಾಮ್ಸನ್‌ ಜತೆಗೆ ಉತ್ತಮವಾಗಿ ಆಡುತ್ತಿದ್ದ ಮತ್ತೋರ್ವ ಆರಂಭಿಕ ಯಶಸ್ವಿ ಜೈಸ್ವಾಲ್‌ 14 ರನ್‌ ಗಳಿಸಿದ್ದಾಗ ರನ್‌ ಔಟ್‌ ಆಗಿ ಹೊರನಡೆದರು. ಬಳಿಕ ರಾಜಸ್ಥಾನ ರಾಯಲ್ಸ್ ಕುಸಿತ ಆರಂಭವಾಯ್ತು. ತಂಡದ ಮೊತ್ತ 60 ರನ್‌ ಆಗಿದ್ದಾಗ ಸಂಜು ಸಾಮ್ಸನ್‌ ಜೋಶುವಾ ಲಿಟಲ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ವಿಕೆಟ್‌ ಚೆಲ್ಲಿದರು. ತಂಡಕ್ಕೆ ಅವರ ಕಾಣಿಕೆ 30 ರನ್‌. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ದೇವದತ್‌ ಪಡಿಕಲ್‌, ರವಿಚಂದ್ರನ್‌ ಅಶ್ವಿನ್‌, ರಿಯಾನ್‌ ಪರಾಗ್‌, ಹೆಟ್ಮಯರ್‌ ಹಾಗೂ ಕೆಳಕ್ರಮಾಂಕದ ಧ್ರುವ್‌ ಜುರೆಲ್‌, ಬೋಲ್ಟ್‌, ಜಂಪಾ ಹಾಗೂ ಸಂದೀಪ್‌ ಶರ್ಮಾ ವಿಫಲರಾದರು. ಟೈಟನ್ಸ್‌ ಪರ ನೂರ್‌ ಅಹ್ಮದ್ 3 , ರಶೀದ್‌ ಖಾನ್‌ ಹಾಗೂ ಮೊಹಮದ್ ಶಮಿ 2 ತಲಾ ಎರಡು ವಿಕೆಟ್‌ ಕಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.