2023 : ರಶೀದ್, ನೂರ್ ಮೋಡಿಗೆ ಒಲಿದ ಜಯ ಜೈಪುರ: ರಶೀದ್ ಖಾನ್ ಮತ್ತು ನೂರ್ ಅಹಮದ್ ಅವರ ಮೋಡಿಯಿಂದಾಗಿ ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರು ಜಯಭೇರಿ ಬಾರಿಸಿತು. ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ರಶೀದ್ (14ಕ್ಕೆ3) ಹಾಗೂ ನೂರ್ ಅಹಮದ್ (25ಕ್ಕೆ2) ಅವರ ದಾಳಿಯ ಮುಂದೆ ರಾಜಸ್ಥಾನ ತಂಡವು 17.5 ಓವರ್‌ಗಳಲ್ಲಿ 118 ರನ್‌ ಮಾತ್ರ ಗಳಿಸಿತು. ಇದಕ್ಕುತ್ತರವಾಗಿ ಗುಜರಾತ್ ತಂಡವು 13.5 ಓವರ್‌ಗಳಲ್ಲಿ 1 ವಿಕೆಟ್‌ಗೆ 119 ರನ್ ಗಳಿಸಿತು. 9 ವಿಕೆಟ್‌ಗಳಿಂದ ಜಯಿಸಿತು. ಯೋಜನಾಬದ್ಧ ಆಟವಾಡಿದ ಹಾರ್ದಿಕ್ ಪಾಂಡ್ಯ ಬಳಗವು ರಾಯಲ್ಸ್ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಜೊಸ್ ಬಟ್ಲರ್ ವಿಕೆಟ್ ಗಳಿಸಿದ ಹಾರ್ದಿಕ್ ಪಾಂಡ್ಯ ಸಂಭ್ರಮಿಸಿದರು. ತಂಡದ ರನ್‌ ಯಂತ್ರವಾಗಿರುವ ಯಶಸ್ವಿ ಜೈಸ್ವಾಲ್ ಅವರು ನಾಯಕ ಸಂಜು ಸ್ಯಾಮ್ಸನ್ ಜೊತೆಗೂಡಿ ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. ಒಂದು ಬೌಂಡರಿಮತ್ತು ಒಂದು ಸಿಕ್ಸರ್ ಬಾರಿಸಿದ್ದ ಯಶಸ್ವಿ ನಿರಾಶೆ ಅನುಭವಿಸಿದರು. ಇಬ್ಬರ ಜೊತೆಯಾಟ ಕುದುರಿತ್ತು. ಆದರೆ ಆರನೇ ಓವರ್‌ನಲ್ಲಿ ಮೋಹಿತ್ ಶರ್ಮಾ ಹಾಗೂ ರಶೀದ್ ಖಾನ್ ಅವರ ಜಂಟಿ ಪ್ರಯತ್ನದಿಂದಾಗಿ ಜೈಸ್ವಾಲ್ ರನ್‌ಔಟ್ ಆದರು. ಇದು ರಾಜಸ್ಥಾನ ಹಿನ್ನಡೆಗೆ ಕಾರಣವಾಯಿತು. ನಂತರದ ಓವರ್‌ನಲ್ಲಿ ಸಂಜು (30; 20ಎ) ಆಟಕ್ಕೆ ಜೊಶುವ ಲಿಟ್ಲ್ ತಡೆಯೊಡ್ಡಿದರು. ಲಯ ಕಂಡುಕೊಳ್ಳಲು ಯತ್ನಿಸಿದ ದೇವದತ್ತ ಪಡಿಕ್ಕಲ್ (12; 12ಎ) ಅವರನ್ನು ನೂರ್ ಅಹಮದ್ ಕ್ಲೀನ್‌ಬೌಲ್ಡ್ ಮಾಡಿದರು. ಅಶ್ವಿನ್, ರಿಯಾನ್ ಪರಾಗ್, ಹೆಟ್ಮೆಯರ್ ಹಾಗೂ ಧ್ರುವ ಜುರೇಲ್ ಅವರಿಗೆ ಕಾಲೂರಿ ನಿಲ್ಲಲು ಸಾಧ್ಯವಾಗಲಿಲ್ಲ. ಇದರಿಂದಾಗಿ ತಂಡವು ನೂರರ ಗಡಿ ಮುಟ್ಟುವ ಮುನ್ನವೇ ಒಟ್ಟು ಎಂಟು ವಿಕೆಟ್‌ಗಳು ಪತನವಾಗಿದ್ದವು. ಕೊನೆಯ ಹಂತದ ಓವರ್‌ಗಳಲ್ಲಿ ಟ್ರೆಂಟ್ ಬೌಲ್ಟ್‌ (15; 11ಎ) ಒಂದಿಷ್ಟು ಹೋರಾಟ ಮಾಡಿದರು. ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ ಅವರು ತಂಡದ ಮೊತ್ತಕ್ಕೆ ರನ್‌ಗಳ ಕಾಣಿಕೆ ನೀಡಿದರು. ಸಾಧಾರಣ ಗುರಿ ಬೆನ್ನಟಿದ ಟೈಟನ್ಸ್‌ ಬಳಗಕ್ಕೆ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಹತ್ತನೇ ಓವರ್ ಬೌಲಿಂಗ್ ಮಾಡಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಗಿಲ್ ಔಟಾದರು. ಸಹಾ (ಔಟಾಗದೆ41; 34ಎ) ಹಾಗೂ ನಾಯಕ ಹಾರ್ದಿಕ್ (ಔಟಾಗದೆ 39; 15ಎ) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.