2023 : ಜಯದ ಹಾದಿಗೆ ಮರಳುವ ಛಲದಲ್ಲಿ ಚೆನ್ನೈ ಚೆನ್ನೈ: ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಶನಿವಾರ ಇಲ್ಲಿ ಮುಖಾಮುಖಿಯಾಗಲಿವೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಜಯದ ಹಾದಿಗೆ ಮರಳುವ ಛಲದಲ್ಲಿದೆ. ಚೆನ್ನೈ ತಂಡವು ಆಡಿರುವ ಕಳೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋತಿತ್ತು. ಇನ್ನೊಂದು ಪಂದ್ಯವು ಮಳೆಯಿಂದಾಗಿ ಸ್ಥಗಿತವಾಗಿತ್ತು. ಈಗಾಗಲೇ ಒಟ್ಟು ಹತ್ತು ಪಂದ್ಯಗಳನ್ನು ಆಡಿರುವ ಧೋನಿ ಬಳಗವು ಐದರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿದೆ. 11 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಇದರಿಂದಾಗಿ ಇನ್ನುಳಿದಿರುವ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರರಲ್ಲಿ ಗೆಲ್ಲುವ ಛಲದಲ್ಲಿದೆ. ತಂಡವು ಬ್ಯಾಟಿಂಗ್‌ ವಿಭಾಗದಲ್ಲಿ ಉತ್ತಮವಾಗಿದೆ. ಡೆವೊನ್ ಕಾನ್ವೆ ಮತ್ತು ಋತುರಾಜ್ ಗಾಯಕವಾಡ ಅವರು ಉತ್ತಮ ಆರಂಭ ನೀಡುತ್ತಿದ್ದಾರೆ. ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜ ಮತ್ತು ಧೋನಿ ಅವರ ಬ್ಯಾಟ್‌ಗಳಿಂದ ರನ್‌ಗಳು ಸರಾಗವಾಗಿ ಹರಿಯುತ್ತಿವೆ. ಇದರಿಂದಾಗಿ ತಂಡವು ಈಗಲೇ 200ಕ್ಕಿಂತ ಹೆಚ್ಚು ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಧೋನಿಗೆ ನಿಜವಾಗಿಯೂ ಚಿಂತೆ ಇರುವುದು ಬೌಲಿಂಗ್ ವಿಭಾಗದಲ್ಲಿ. ಅನುಭವದ ಕೊರತೆ ಇರುವ ಬೌಲಿಂಗ್ ಪಡೆಯಿಂದಾಗಿ ಪಂದ್ಯಗಳನ್ನು ಕೈಚೆಲ್ಲುವಂತಾಗಿದೆ. ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಬೌಲರ್‌ಗಳು ನಂತರದ ಹಂತದಲ್ಲಿ ಮಂಕಾಗುತ್ತಾರೆ. ಮಥೀಷ ಪಥಿರಾಣ, ಮಹೀಷ ತೀಕ್ಷಣ ಮತ್ತು ತುಷಾರ್ ದೇಶಪಾಂಡೆ ತಮ್ಮ ಪ್ರತಿಭೆಗೆ ತಕ್ಕಂತೆ ಬೌಲಿಂಗ್ ಮಾಡಿದರೆ ಧೋನಿ ಚಿಂತೆ ದೂರಾಗಬಹುದು. ಐದುಬಾರಿಯ ಚಾಂಪಿಯನ್ ಮುಂಬೈ ತಂಡವು ಟೂರ್ನಿಯಲ್ಲಿ ತನ್ನ ಆರಂಭಿಕ ವೈಫಲ್ಯಗಳಿಂದ ಪುಟಿದೆದ್ದು ಬಂದಿದೆ. ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕಳೆದೆರಡು ಪಂದ್ಯಗಳಲ್ಲಿ ಜಯಿಸಿ ಆತ್ಮವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡದ ಬ್ಯಾಟಿಂಗ್‌ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಅವರ ಮೇಲೆ ಅವಲಂಬಿತವಾಗಿದೆ. ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೌಲಿಂಗ್ ಮಾಡಬೇಕಿದೆ. ಸ್ಪಿನ್ನರ್ ಪೀಯೂಷ್ ಚಾವ್ಲಾ ಇದುವರೆಗೆ ಉತ್ತಮ ಲಯದಲ್ಲಿದ್ದಾರೆ. ಚೆನ್ನೈನ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಮುಂಬೈ ಯಶಸ್ವಿಯಾದರೆ, ಮೊದಲ ಸುತ್ತಿನಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಬಹುದು. ಪಂದ್ಯ ಆರಂಭ: ಮಧ್ಯಾಹ್ನ 3.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.