: ಮುಂಬೈ ಇಂಡಿಯನ್ಸ್‌ ಜಯಭೇರಿ ಮೊಹಾಲಿ: ಇಶಾನ್‌ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್‌ ಅವರ ಸ್ಫೋಟಕ ಬ್ಯಾಟಿಂಗ್ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟಿತು. ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ 6 ವಿಕೆಟ್‌ಗಳಿಂದ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಸೋಲುಣಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 214 ರನ್‌ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ 18.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 216 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಮುಂಬೈ ತಂಡವು ನಾಯಕ ರೋಹಿತ್ ಶರ್ಮಾ ಅವರನ್ನು ಮೊದಲ ಓವರ್‌ನಲ್ಲಿ ಕಳೆದು ಕೊಂಡಿತು. ಅವರನ್ನು ರಿಷಿ ಧವನ್‌ ಶೂನ್ಯಕ್ಕೆ ಔಟ್ ಮಾಡಿದರು. ಎರಡನೇ ವಿಕೆಟ್‌ಗೆ ಕ್ಯಾಮರಾನ್ ಗ್ರೀನ್‌ (23) ಹಾಗೂ ಇಶಾನ್‌ (75) 53 ರನ್‌ ಸೇರಿಸಿದರು. ಗ್ರೀನ್ ವಿಕೆಟ್‌ ಪತನದ ಬಳಿಕ ಇಶಾನ್‌ಗೆ ಜೊತೆಯಾದ ಸೂರ್ಯ (66) 3ನೇ ವಿಕೆಟ್‌ಗೆ 55 ಎಸೆತಗಳಲ್ಲಿ 116 ರನ್‌ ಕಲೆ ಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಶಾನ್‌ ಆಟದಲ್ಲಿ ಏಳು ಬೌಂಡರಿ ನಾಲ್ಕು ಸಿಕ್ಸರ್ ಇದ್ದರೆ, ಸೂರ್ಯ ಎಂಟು ಬೌಂಡರಿ ಎರಡು ಸಿಕ್ಸರ್ ಸಿಡಿಸಿದರು. ಸೂರ್ಯ ಹಾಗೂ ಇಶಾನ್‌ ಕ್ರಮವಾಗಿ 16 ಮತ್ತು 17ನೇ ಓವರ್‌ ನಲ್ಲಿ ಔಟಾದರೂ ಕೊನೆಯಲ್ಲಿ ಟಿಮ್ ಡೇವಿಡ್‌ ಮತ್ತು ತಿಲಕ್ ವರ್ಮಾ ತಂಡವನ್ನು ಜಯದ ದಡ ಸೇರಿಸಿದರು. ಪಂಜಾಬ್‌ ವೇಗಿ ಆರ್ಷದೀಪ್ ಸಿಂಗ್‌ 66 ರನ್‌ ನೀಡಿ ದುಬಾರಿಯಾದರು. ಶತಕದ ಜೊತೆಯಾಟ: ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರ ಶತಕದ ಜೊತೆಯಾಟದಿಂದಾಗಿ ಪಂಜಾಬ್ ತಂಡವು ಬೃಹತ್ ಮೊತ್ತ ಪೇರಿಸಿತ್ತು. ಲಿಯಾಮ್ (ಅಜೇಯ 82; 42ಎ) ಮತ್ತು ಜಿತೇಶ್ (ಅಜೇಯ 49; 27ಎ) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 119 ರನ್‌ ಸೇರಿಸಿದರು. ಇದಕ್ಕಾಗಿ ಅವರಿಬ್ಬರೂ ಆಡಿದ್ದು 53 ಎಸೆತಗಳನ್ನು ಮಾತ್ರ! ನಾಯಕ ಶಿಖರ್ ಧವನ್ (30; 20ಎ) ಹಾಗೂ ಮ್ಯಾಥ್ಯೂ ಶಾರ್ಟ್‌ (27; 26ಎ) ಕೂಡ ಮೊತ್ತ ಹೆಚ್ಚಲು ಕಾರಣದಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.