ಕಾಮೆಂಟ್ರಿ ಬಾಕ್ಸ್‌ನಿಂದ ಆರ್‌ಸಿಬಿ ತಂಡಕ್ಕೆ ಕೇದಾರ್ ಬೆಂಗಳೂರು/ನವದೆಹಲಿ: ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅಚ್ಚರಿಯೊಂದು ನಡೆದಿದೆ. ಜಿಯೊ ಸಿನಿಮಾ ಆ್ಯಪ್‌ಗಾಗಿ ಮರಾಠಿ ಭಾಷೆಯ ವೀಕ್ಷಕ ವಿವರಣೆ ಕಾರ್ಯನಿರ್ವಹಿಸುತ್ತಿದ್ದ ಕೇದಾರ್ ಜಾಧವ್ ಅವರಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಲಭಿಸಿದೆ. ’ನನಗೆ ಅವತ್ತು ಆರ್‌ಸಿಬಿ ಕೋಚ್ ಸಂಜಯ್ ಬಾಂಗರ್ ಅವರು ಕರೆ ಮಾಡಿ ತಂಡದಲ್ಲಿ ಆಡಲು ಆಹ್ವಾನಿಸಿದಾಗ ಅಚ್ಚರಿಯಾಗಿತ್ತು. ಆದರೆ ಖುಷಿಯೂ ಆಗಿತ್ತು‘ ಎಂದು ಆಲ್‌ರೌಂಡರ್ ಕೇದಾರ್ ಜಾಧವ್ ತಂಡವು ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ’ಅವತ್ತು ಕರೆ ಮಾಡಿದ್ದ ಸಂಜಯ್, ನನ್ನ ಕ್ರಿಕೆಟ್ ಅಭ್ಯಾಸ ಮತ್ತು ಫಿಟ್‌ನೆಸ್‌ ಬಗ್ಗೆ ವಿಚಾರಿಸಿದ್ದರು. ವಾರದಲ್ಲಿ ಎರಡು ದಿನ ಕ್ರಿಕೆಟ್ ಅಭ್ಯಾಸ ಮಾಡುತ್ತೇನೆ. ಜಿಮ್ನಾಷಿಯಂನಲ್ಲಿ ತಪ್ಪದೇ ವ್ಯಾಯಾಮ ಮಾಡುತ್ತಿದ್ದು, ಉತ್ತಮ ದೇಹದಾರ್ಢ್ಯ ಕಾಪಾಡಿಕೊಂಡಿದ್ದೇನೆಂದು ತಿಳಿಸಿದ್ದೆ. ಸ್ವಲ್ಪ ಹೊತ್ತಿನ ನಂತರ ಕರೆ ಮಾಡುವುದಾಗಿ ಹೇಳಿ ಸಂಜಯ್ ಕರೆ ಮುಗಿಸಿದ್ದರು. ಅವರು ತಂಡಕ್ಕೆ ಆಹ್ವಾನಿಸಲಿದ್ದಾರೆಂದು ಆಗಲೇ ನನಗನಿಸಿತ್ತು. ಹಾಗೆಯೇ ಆಯಿತು‘ ಎಂದು ಕೇದಾರ್ ನೆನಪಿಸಿಕೊಂಡರು. ಕೇದಾರ್ ಅವರು 2016 ಹಾಗೂ 2017ರಲ್ಲಿ ಆರ್‌ಸಿಬಿಯಲ್ಲಿ ಆಡಿದ್ದರು. ಒಟ್ಟು 17 ಪಂದ್ಯಗಳನ್ನು ಆಡಿ 311 ರನ್‌ ಗಳಿಸಿದ್ದರು. ಈಚೆಗೆ ಮುಗಿದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅವರು ಮಹಾರಾಷ್ಟ್ರ ತಂಡದ ಪರವಾಗಿ ಉತ್ತಮವಾಗಿ ಆಡಿದ್ದರು. 283 ರನ್‌ಗಳನ್ನು ಗಳಿಸಿದ್ದರು. ’ಸುಮಾರು ಒಂದು ವರ್ಷ ಬಿಡುವು ಪಡೆದುಕೊಂಡಿದ್ದೆ. ಆದರೆ ಈ ಅವಧಿಯಲ್ಲಿ ನನ್ನ ನೆಚ್ಚಿನ ಕ್ರಿಕೆಟ್‌ ಅನ್ನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಮೂಡಿತ್ತು. ಅದರಿಂದಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಿದೆ. ಈಗಲೂ ನನಗೆ 20ನೇ ವಯಸ್ಸಿನಲ್ಲಿದ್ದಂತೆಯೇ ಆಟದ ಹಸಿವು ಇದೆ. ಎಲ್ಲ ಹಂತಗಳಲ್ಲಿಯೂ ಆಡುವ ಸಾಮರ್ಥ್ಯವಿದೆ‘ ಎಂದು 38 ವರ್ಷದ ಕೇದಾರ್ ವಿಶ್ವಾಸ ವ್ಯಕ್ತಪಡಿಸಿದರು. ಆರ್‌ಸಿಬಿ ತಂಡವು ಕೇದಾರ್ ಜಾಧವ್ ಅವರಿಗೆ ಡೇವಿಡ್ ವಿಲ್ಲಿ ಬದಲಿಗೆ ಸ್ಥಾನ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.