2023 : ಅಗ್ರಸ್ಥಾಕ್ಕೇರಲು ಪೈಪೋಟಿ ರಾಯಲ್ಸ್‌– ಟೈಟನ್ಸ್‌ ಮುಖಾಮುಖಿ ಇಂದು ಜೈಪುರ: ಅಸ್ಥಿರ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ, ಅಗ್ರಸ್ಥಾನದಲ್ಲಿರುವ ಗುಜರಾತ್‌ ಟೈಟನ್ಸ್‌ ತಂಡವನ್ನು ಶುಕ್ರವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಎದುರಿಸಲಿದೆ. ಎರಡೂ ತಂಡಗಳ ನಡುವೆ ಉತ್ತಮ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ. ಈ ಹಿಂದಿನ ಪಂದ್ಯದಲ್ಲಿ ಸೋಲುಂಡಿರುವ ಈ ಎರಡೂ ತಂಡಗಳು ಗೆಲುವಿನ ಲಯಕ್ಕೆ ಮರಳಲು ಕಾತರದಿಂದ ಇವೆ. ತಳದಲ್ಲಿರುವ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಬಳಗ ಐದು ರನ್‌ಗಳಿಂದ ಸೋತಿದ್ದರೂ, ಅಗ್ರಸ್ಥಾನ ಕಾಪಾಡಿಕೊಂಡಿದೆ. ಸಂಜು ಸಾಮ್ಯನ್ಸ್ ಬಳಗ 10 ಪಾಯಿಂಟ್ಸ್ ಸಂಗ್ರಹಿಸಿದ್ದು ತಂಡ ನಾಲ್ಕನೇ ಸ್ಥಾನದಲ್ಲಿದೆ. ಉತ್ತಮ ನಿವ್ವಳ ರನ್‌ರೇಟ್‌ (+0.800) ಹೊಂದಿರುವ ರಾಯಲ್ಸ್‌ ತಂಡ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಕೊನೆಯ ಆರು ಪಂದ್ಯಗಳಲ್ಲಿ ಅದು ಮೂರು ಸೋತು, ಮೂರು ಗೆದ್ದಿರುವುದು ರಾಯಲ್ಸ್‌ ಕಾಣುತ್ತಿರುವ ಏರಿಳಿತಕ್ಕೆ ನಿದರ್ಶನ. ಉತ್ತಮ ಬೌಲಿಂಗ್ ಘಟಕ ಹೊಂದಿದ್ದರೂ ಮುಂಬೈ ವಿರುದ್ಧ ಕೊನೆಯ ಪಂದ್ಯದಲ್ಲಿ 212 ರನ್‌ಗಳ ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ವೇಗದ ಬೌಲರ್ ಟ್ರೆಂಟ್‌ ಬೌಲ್ಟ್‌, ಆಲ್‌ರೌಂಡರ್‌ ಜೇಸನ್ ಹೋಲ್ಡರ್‌, ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್‌ ಸೇನ್ ಎಲ್ಲರೂ ದುಬಾರಿಯಾಗಿದ್ದರು. ಈಗ ತವರಿನಂಗಳದಲ್ಲಿ ಬೌಲರ್‌ಗಳು ಉತ್ತಮ ನಿರ್ವಹಣೆಯ ನಿರೀಕ್ಷೆಯಲ್ಲಿದ್ದಾರೆ. ಋತುವಿನ ಆರಂಭದಲ್ಲಿ ಗುಜರಾತ್‌ ಮೇಲೆ ಸಾಧಿಸಿದ್ದ ಗೆಲುವು ರಾಯಲ್ಸ್‌ಗೆ ಸ್ಥೈರ್ಯ ತುಂಬಲಿದೆ. ಪ್ರತಿಭಾನ್ವಿತ ಯಶಸ್ವಿ ಜೈಸ್ವಾಲ್‌ ಉತ್ತಮ ಲಯದಲ್ಲಿದ್ದಾರೆ. ಜೋಸ್‌ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಹೆಟ್ಮೆಯರ್ ಅವರೂ ಬಿರುಸಿನ ಆಟವಾಡುವ ಸಮರ್ಥರು. ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಅವರ ನೇತೃತ್ವದ ದಾಳಿ ಹೇಗೆ ಎದುರಿಸುತ್ತಾರೆ ಎಂಬುದೂ ಕುತೂಹಲಕರ. ಇನ್ನೊಂದೆಡೆ, ಟೈಟನ್ಸ್ ಕಳೆದ ಪಂದ್ಯದಲ್ಲಿ ದೆಹಲಿ ನಿಗದಿಪಡಿಸಿದ್ದ 130 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿತ್ತು. ಶುಭಮನ್ ಗಿಲ್‌, ಡೇವಿಡ್ ಮಿಲ್ಲರ್‌ ವಿಫಲರಾದರೆ, ನಾಯಕ ಹಾರ್ದಿಕ್ ಪಾಂಡ್ಯ ಕ್ರೀಸ್‌ನಲ್ಲಿದ್ದರೂ ಅವರಿಗೆ ‘ಗೆಲುವಿನ ಫಿನಿಷಿಂಗ್’ ಸಾಧ್ಯವಾಗಲಿಲ್ಲ. ಶಮಿ ಉತ್ತಮ ಸ್ವಿಂಗ್‌ ಮೂಲಕ ಎದುರಾಳಿ ತಂಡಕ್ಕೆ ಆರಂಭದಲ್ಲಿ ಪ್ರಹಾರ ನೀಡಿದ್ದರು. ಇಲ್ಲೂ ಅಂಥದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ರಶೀದ್ ಖಾನ್ ಮತ್ತು ಅಫ್ಗಾನಿಸ್ತಾನದ ಇನ್ನೊಬ್ಬ ಸ್ಪಿನ್ನರ್ ನೂರ್ ಅಹ್ಮದ್ ಅವರಿಂದ ತಂಡ ಬೌಲಿಂಗ್ ವೈವಿಧ್ಯ ಹೊಂದಿದೆ. ಪಂದ್ಯ ಆರಂಭ: ರಾತ್ರಿ 7.30. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನಿಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.