2023 : ಕೋಲ್ಕತ್ತ ನೈಟ್‌ ರೈಡರ್ಸ್‌ ಜಯಭೇರಿ ಹೈದರಾಬಾದ್: ಕೈಯಲ್ಲಿ ಮೂರು ವಿಕೆಟ್‌ಗಳಿದ್ದರೂ ಕೊನೆಯ ಎಂಟು ಎಸೆತಗಳಲ್ಲಿ 10 ರನ್‌ ಗಳಿಸಲು ವಿಫಲವಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಐಪಿಎಲ್‌ ಟೂರ್ನಿಯಲ್ಲಿ ಆರನೇ ಸೋಲು ಎದುರಾಯಿತು. ಅಂತಿಮ ಓವರ್‌ನಲ್ಲಿ ಕೈಚಳಕ ಮೆರೆದ ಸ್ಪಿನ್ನರ್‌ ವರುಣ್ ಚಕ್ರವರ್ತಿ ಅವರು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಗೆಲುವಿಗೆ ಕಾರಣರಾದರು. ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನಿತೀಶ್‌ ರಾಣಾ ಬಳಗ ಐದು ರನ್‌ಗಳಿಂದ ಗೆದ್ದು ‘ಪ್ಲೇ ಆಫ್‌’ ಪ್ರವೇಶದ ಕನಸು ಜೀವಂತವಾಗಿರಿಸಿಕೊಂಡಿತು. ಕೋಲ್ಕತ್ತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 171 ರನ್‌ ಗಳಿಸಿತು. ನಾಯಕ ರಾಣಾ (42; 31ಎ) ಮತ್ತು ರಿಂಕು ಸಿಂಗ್ (46; 35ಎ) ಅವರು ಉಪಯುಕ್ತ ಕಾಣಿಕೆ ನೀಡಿದರು. ಸನ್‌ರೈಸರ್ಸ್‌ ತಂಡದ ಹೋರಾಟ 8 ವಿಕೆಟ್‌ ನಷ್ಟಕ್ಕೆ 166 ರನ್‌ಗಳಿಗೆ ಕೊನೆಗೊಂಡಿತು. ವರುಣ್‌ (20ಕ್ಕೆ 1) ಅಲ್ಲದೆ ವೈಭವ್‌ ಅರೋರ (32ಕ್ಕೆ 2) ಮತ್ತು ಶಾರ್ದೂಲ್‌ ಠಾಕೂರ್‌ (23ಕ್ಕೆ 2) ಬಿಗುವಾದ ಬೌಲಿಂಗ್‌ ಮೂಲಕ ಗಮನ ಸೆಳೆದರು. ಸಾಧಾರಣ ಗುರಿ ಬೆನ್ನಟ್ಟಿದ ಹೈದರಾಬಾದ್‌, 54 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ನಾಯಕ ಏಡನ್‌ ಮರ್ಕರಂ (41 ರನ್‌, 40 ಎ.) ಮತ್ತು ಹೆನ್ರಿಚ್‌ ಕ್ಲಾಸೆನ್‌ (36 ರನ್‌, 20 ಎ.) ಐದನೇ ವಿಕೆಟ್‌ಗೆ 70 ರನ್‌ ಸೇರಿಸಿದರು. ಆದರೆ ಇವರಿಬ್ಬರು ಔಟಾದ ಬಳಿಕ ಕೆಕೆಆರ್‌ ಬೌಲರ್‌ಗಳು ಹಿಡಿತ ಬಿಗಿಗೊಳಿಸಿದರು. ವರುಣ್‌ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿ 9 ರನ್‌ಗಳು ಬೇಕಿದ್ದವು. ಅಬ್ದುಲ್‌ ಸಮದ್‌ ಆ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರೆ, ಭುವನೇಶ್ವರ್‌ ಕುಮಾರ್‌, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ವಿಫಲರಾದರು. ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ವೇಗಿ ಮಾರ್ಕೊ ಜೆನ್ಸನ್ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಬಲವಾದ ಪೆಟ್ಟುಕೊಟ್ಟರು. ರೆಹಮಾನುಲ್ಲಾ ಗುರ್ಬಾಜ್ ಮತ್ತು ವೆಂಕಟೇಶ್ ಅಯ್ಯರ್ ವಿಕೆಟ್ ಉರುಳಿಸಿದರು. ಜೇಸನ್‌ ರಾಯ್‌ ಐದನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ಜೊತೆಯಾದ ರಾಣಾ ಮತ್ತು ರಿಂಕು ಸಿಂಗ್ ಇನಿಂಗ್ಸ್‌ಗೆ ಬಲ ತುಂಬಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 61 ರನ್‌ ಸೇರಿಸಿದರು. ರಾಣಾ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ರಿಂಕು ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು. ಆದರೆ ಇವರಿಬ್ಬರಿಗೂ ಅರ್ಧಶತಕ ಪೂರೈಸಲು ಬೌಲರ್‌ಗಳು ಬಿಡಲಿಲ್ಲ. ಸನ್‌ರೈಸರ್ಸ್ ನಾಯಕ ಏಡನ್ ಮರ್ಕರಂ ತಮ್ಮದೇ ಬೌಲಿಂಗ್‌ನಲ್ಲಿ ನಿತೀಶ್ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಎಡಗೈ ವೇಗಿ ನಟರಾಜನ್ ಬೌಲಿಂಗ್‌ನಲ್ಲಿ ರಿಂಕು ಅವರು ಅಬ್ದುಲ್ ಸಮದ್ ಪಡೆದ ಕ್ಯಾಚ್‌ಗೆ ಔಟಾದರು. ಆ್ಯಂಡ್ರೆ ರಸೆಲ್ ಎರಡು ಸಿಕ್ಸರ್ ಸಿಡಿಸಿ ತಂಡಕ್ಕೆ ದೊಡ್ಡ ಮೊತ್ತ ಗಳಿಸಿಕೊಡುವ ಭರವಸೆ ಮೂಡಿಸಿದ್ದರು. ಆದರೆ 24 ರನ್‌ ಗಳಿಸಿದ್ದ ಅವರು ಮಯಂಕ್ ಮಾರ್ಕಂಡೆ ಬೌಲಿಂಗ್‌ನಲ್ಲಿ ಔಟಾದರು. ಈ ಹಂತದಿಂದ ಬೌಲರ್‌ಗಳು ಹಿಡಿತ ಸಾಧಿಸಿದರು. ಇದರಿಂದಾಗಿ ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ರನ್‌ಗಳು ಹರಿಯಲಿಲ್ಲ. ತಂಡವು 200 ರನ್‌ಗಳ ಗಡಿಯನ್ನೂ ದಾಟಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.