ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದ ಕೆ.ಎಲ್. ರಾಹುಲ್ ನವದೆಹಲಿ: ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಕನ್ನಡಿಗ ಕೆ.ಎಲ್. ರಾಹುಲ್ ಅವರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಿಂದ ಹೊರಗುಳಿದಿದ್ದಾರೆ. ಡಬ್ಲ್ಯುಟಿಸಿ ಫೈನಲ್‌ ಓವಲ್‌ ಕ್ರೀಡಾಂಗಣದಲ್ಲಿ ಜೂನ್‌ 7 ರಿಂದ 11ರವರೆಗೆ ಭಾರತ – ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅವರು ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬಲ ತೊಡೆಯ ಸ್ನಾಯುಸೆಳೆತದಿಂದ ಬಳಲಿದ್ದರು. ಈ ಗಾಯವು ಗಂಭೀರವಾಗಿದ್ದು, ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಪ್ರಸಕ್ತ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ನಾನು ಮುಂದಿನ ತಿಂಗಳು ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಆಡುವುದಿಲ್ಲ. ಆದರೆ, ನೀಲಿ ಜರ್ಸಿ ತೊಡುವುದಕ್ಕೆ ಮತ್ತು ದೇಶವನ್ನು ಪ್ರತಿನಿಧಿಸಲು ನಾನು ಸದಾ ಸಿದ್ಧನಿರುತ್ತೇನೆ. ಅದು ಯಾವಾಗಲೂ ನನ್ನ ಗಮನ ಮತ್ತು ಆದ್ಯತೆಯಾಗಿದೆ ಎಂದು ರಾಹುಲ್ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ನಾನು ಶೀಘ್ರದಲ್ಲೇ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಅದಷ್ಟು ಬೇಗ ಚೇತರಿಸಿಕೊಳ್ಳಲಿದ್ದೇನೆ ಎಂದು ರಾಹುಲ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.