2023: ತವರಿನಂಗಣದಲ್ಲಿ ವಿಜೃಂಭಿಸುವರೇ ವಿರಾಟ್? ನವದೆಹಲಿ: ವಿರಾಟ್ ಕೊಹ್ಲಿ ತಮ್ಮ ತವರೂರಿನ ಅಂಗಳಕ್ಕೆ ಮರಳಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅವರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಲಿವೆ. ಹೋದ ತಿಂಗಳು ಈ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು. ಆಗ ಆರ್‌ಸಿಬಿ ಜಯಗಳಿಸಿತ್ತು. ಇದುವರೆಗೆ ಆರ್‌ಸಿಬಿ ತಂಡವು ಒಂಬತ್ತು ಪಂದ್ಯಗಳನ್ನು ಆಡಿ ಐದರಲ್ಲಿ ಜಯಿಸಿ, ನಾಲ್ಕರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಪ್ರವೇಶಿಸಲು ಡೆಲ್ಲಿ ವಿರುದ್ಧ ಸೇರಿದಂತೆ ಉಳಿದೆಲ್ಲ ಪಂದ್ಯಗಳಲ್ಲಿಯೂ ಜಯಿಸುವ ಒತ್ತಡ ಆರ್‌ಸಿಬಿಗೆ ಇದೆ. ಆದರೆ ನಾಯಕ ಫಫ್ ಡುಪ್ಲೆಸಿ, ವಿರಾಟ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮಾತ್ರ ರನ್‌ ಗಳಿಸುತ್ತಿದ್ದಾರೆ. ಉಳಿದ ಬ್ಯಾಟರ್‌ಗಳು ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಮೂವರ ಮೇಲೆಯೇ ತಂಡವು ಅವಲಂಬಿತವಾಗಿದೆ. 466 ರನ್ ಗಳಿಸಿರುವ ಫಫ್ ಅವರು ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಈ ಮೂವರೂ ಹೆಚ್ಚು ರನ್‌ ಗಳಿಸದಂತೆ ಕಟ್ಟಿಹಾಕಿತ್ತು. ಅದರಿಂದಾಗಿ ಆರ್‌ಸಿಬಿ ತಂಡವು ಸಾಧಾರಣ ಮೊತ್ತದ ಗುರಿ ನೀಡಿತ್ತು. ಆದರೆ ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್ ಹಾಗೂ ಕರಣ್ ಶರ್ಮಾ ಅವರ ಬೌಲಿಂಗ್ ಪಡೆಯು ಆರ್‌ಸಿಬಿಗೆ ಗೆಲುವಿನ ಕಾಣಿಕೆ ನೀಡಿತ್ತು. ಪಂದ್ಯದ ನಂತರ ಕೊಹ್ಲಿ ಮತ್ತು ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ನಡುವಣ ಜಟಾಪಟಿ ದೊಡ್ಡ ಸದ್ದು ಮಾಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಪರಿಸ್ಥಿತಿ ಚಿಂತಾಜನಕವಾಗಿದೆ. ಡೇವಿಡ್ ವಾರ್ನರ್ ಬಳಗವು ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.ಇದುವರೆಗೆ ಮೂರರಲ್ಲಿ ಗೆದ್ದು, ಆರರಲ್ಲಿ ಸೋತಿದೆ. ಇದರಿಂದಾಗಿ ಪ್ಲೇ ಆಫ್‌ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಆದರೆ ತಂಡವು ಅಚ್ಚರಿಯ ಫಲಿತಾಂಶ ನೀಡಿ ಎದುರಾಳಿಯ ಯೋಜನೆಗಳಿಗೆ ಅಡ್ಡಿಯಾಗುವ ಸಾಮರ್ಥ್ಯ ಹೊಂದಿದೆ. ತನ್ನ ಕಳೆದ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನೇ ಡೆಲ್ಲಿ ಮಣಿಸಿ ಅಚ್ಚರಿ ಮೂಡಿಸಿತ್ತು. ಎಡಗೈ ವೇಗಿ ಖಲೀಲ್ ಅಹಮದ್, ಅನುಭವಿ ವೇಗಿ ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಅವರ ಮುಂದೆ ಈಗ ಆರ್‌ಸಿಬಿಯ ಅಗ್ರ ಮೂರು ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಇದೆ. ಅದರಲ್ಲಿ ಅವರು ಯಶಸ್ವಿಯಾದರೆ, ಆರ್‌ಸಿಬಿ ಹಾದಿ ಕಠಿಣವಾಗುವುದರಲ್ಲಿ ಅನುಮಾನವಿಲ್ಲ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನಿಮಾ ಆ್ಯಪ್ – ನಾಯಕರ ಬಲಾಬಲ ಫಫ್ ಡುಪ್ಲೆಸಿ ಪಂದ್ಯ;9 ರನ್;466 ಅರ್ಧಶತಕ;5 – ಡೇವಿಡ್ ವಾರ್ನರ್ ಪಂದ್ಯ;9 ರನ್;308 ಅರ್ಧಶತಕ;4 * ಪ್ರಸಕ್ತ ಐಪಿಎಲ್‌ನಲ್ಲಿ ಕೊಹ್ಲಿ ಸಾಧನೆ ಪಂದ್ಯ;9 ರನ್;364 ಸ್ಟ್ರೈಕ್‌ರೇಟ್;137.88 ಅರ್ಧಶತಕ;5 ಶ್ರೇಷ್ಠ;82 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.