2023: ಜಯದ ಹಾದಿಗೆ ಮರಳುವತ್ತ ರಾಜಸ್ಥಾನ ರಾಯಲ್ಸ್ ಚಿತ್ತ ಜೈಪುರ: ರಾಜಸ್ಥಾನ ರಾಯಲ್ಸ್ ತಂಡವು ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಜಯಿಸಬೇಕು. ಈ ಪಂದ್ಯದಲ್ಲಿ ಜಯಿಸಿದರೆ ತಂಡದ ಪ್ಲೇ ಆಫ್‌ ಪ್ರವೇಶದ ಕನಸು ಜೀವಂತವಾಗುಳಿಯಬಹುದು. ಸೋತರೆ ಹಾದಿ ಕಠಿಣವಾಗುವ ಸಾಧ್ಯತೆಯೂ ಇದೆ. ತನ್ನ ಕಳೆದೆರಡು ಪಂದ್ಯಗಳಲ್ಲಿಯೂ ರಾಜಸ್ಥಾನ ತಂಡವು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್‌ ಎದುರು ಸೋತಿತ್ತು. ಯಶಸ್ವಿ ಜೈಸ್ವಾಲ್, ಜೊಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್, ದೇವದತ್ತ ಪಡಿಕ್ಕಲ್ ಅವರಂತಹ ಬ್ಯಾಟರ್‌ಗಳಿದ್ದೂ ಕಳೆದ ಪಂದ್ಯದಲ್ಲಿ ತಂಡವು ಕೇವಲ 118 ರನ್‌ ಮಾತ್ರ ಗಳಿಸಿತ್ತು. ಇದರಿಂದಾಗಿ ಬ್ಯಾಟರ್‌ಗಳೂ ತಮ್ಮ ಲಯಕ್ಕೆ ಮರಳುವ ಸವಾಲು ಇದೆ. ಸನ್‌ರೈಸರ್ಸ್‌ ತಂಡದ ಟಿ.ನಟರಾಜನ್, ಮಾರ್ಕೊ ಜೆನ್ಸನ್ ಹಾಗೂ ಮಯಂಕ್ ಮಾರ್ಕಂಡೆ ಅವರು ಉತ್ತಮ ಲಯದಲ್ಲಿದ್ದು ರಾಜಸ್ಥಾನ ಬ್ಯಾಟಿಂಗ್ ಪಡೆಯನ್ನು ಕಾಡುವ ಸಾಧ್ಯತೆ ಇದೆ. ರಾಜಸ್ಥಾನ ತಂಡವು ಐದು ಪಂದ್ಯ ಗೆದ್ದು ಅಷ್ಟೇ ಸಂಖ್ಯೆಯ ಹಣಾಹಣಿಗಳಲ್ಲಿ ಸೋತಿದೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಸನ್‌ರೈಸರ್ಸ್ ತಂಡವು ಮೂರು ಪಂದ್ಯಗಳಲ್ಲಿ ಜಯಿಸಿ, ಅರರಲ್ಲಿ ಸೋತಿದೆ. ಒಂಬತ್ತನೇ ಸ್ಥಾನದಲ್ಲಿದ್ದು ಪ್ಲೇ ಆಫ್‌ ಹಾದಿ ದುರ್ಗಮವಾಗಿದೆ. ಸಂಜು ಬಳಗದ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವೇಗಿ ಟ್ರೆಂಟ್ ಬೌಲ್ಟ್ ಹಾಗೂ ಸಂದೀಪ್ ಶರ್ಮಾ ಅವರು ತಮ್ಮ ಉತ್ತಮ ಲಯದಲ್ಲಿಯೇ ಮುಂದುವರಿದರೆ ತಂಡಕ್ಕೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ. ಏಡನ್ ಮರ್ಕರಂ ನಾಯಕತ್ವದ ಸನ್‌ರೈಸರ್ಸ್ ತಂಡದ ಬ್ಯಾಟರ್‌ಗಳು ಅಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ ರಾಜಸ್ಥಾನ ಬೌಲರ್‌ಗಳಿಗೆ ಮೇಲುಗೈ ಸಾಧಿಸುವುದು ಕಷ್ಟವಾಗಲಿಕ್ಕಿಲ್ಲ. ಪಂದ್ಯ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.