2023: ಮುಂಬೈ ಇಂಡಿಯನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್‌ ಜಯಭೇರಿ ಚೆನ್ನೈ: ಮಧ್ಯಮವೇಗಿ ಮಥೀಷ ಪಥಿರಾಣ (15ಕ್ಕೆ3) ಹಾಗೂ ದೀಪಕ್ ಚಾಹರ್ (18ಕ್ಕೆ2) ಅವರ ಅಮೋಘ ಬೌಲಿಂಗ್‌ನಿಂದಾಗಿ ಚೆನ್ನೈ ತಂಡವು ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು 6 ವಿಕೆಟ್‌ಗಳಿಂದ ಜಯಿಸಿತು. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಚೆನ್ನೈ ಬೌಲರ್‌ಗಳು ನಿರಾಶಾದಾಯಕ ಆಟವಾಡಿದ್ದರು. ಆಗ ನಾಯಕ ಧೋನಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈ ಪಂದ್ಯದಲ್ಲಿ ಸುಧಾರಿತ ಆಟವಾಡಿದ ಬೌಲರ್‌ಗಳು ಮುಂಬೈ ಇಂಡಿಯನ್ಸ್ ಬಳಗವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 139 ರನ್‌ಗಳಿಗೆ ಕಟ್ಟಿಹಾಕಿದರು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಇನ್ನೂ 14 ಎಸೆತಗಳು ಬಾಕಿಯಿರುವಾಗಲೇ 4 ವಿಕೆಟ್‌ಗಳಿಗೆ 140 ರನ್‌ ಗಳಿಸಿ ಜಯಭೇರಿ ಬಾರಿಸಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ದಂಡು ಸಂಭ್ರಮಿಸಿತು. ಈ ಗೆಲುವಿನೊಂದಿಗೆ ಚೆನ್ನೈ ಖಾತೆಯಲ್ಲಿ ಈಗ ಒಟ್ಟು 13 ಅಂಕಗಳು ಸಂಗ್ರಹವಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಕ್ಯಾಮರಾನ್ ಗ್ರೀನ್ ವಿಕೆಟ್ ಉರುಳಿಸಿದ ತುಷಾರ್ ದೇಶಪಾಂಡೆ ಚೆನ್ನೈಗೆ ಉತ್ತಮ ಆರಂಭ ನೀಡಿದರು. ದೀಪಕ್ ಚಾಹರ್ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಅವರಿಬ್ಬರ ವಿಕೆಟ್‌ಗಳನ್ನೂ ಕಬಳಿಸಿದರು. ಈ ಹಂತದಲ್ಲಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನವನ್ನು ನೆಹಲ್ ವಡೇರಾ (64; 51ಎ, 4X8, 6X1) ಮತ್ತು ಸೂರ್ಯಕುಮಾರ್ ಯಾದವ್ (26; 22ಎ, 4X3) ಮಾಡಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 55 ರನ್ ಸೇರಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಸೂರ್ಯಕುಮಾರ್ ವಿಕೆಟ್ ಉರುಳಿಸಿ ಜೊತೆಯಾಟ ಮುರಿದರು. ಆದರೆ ಈ ಹಂತದಲ್ಲಿ ಇನ್ನೊಂದು ಬದಿಯಲ್ಲಿದ್ದ ವಡೇರಾ ತಮ್ಮ ಆಟಕ್ಕೆ ವೇಗ ನೀಡಿದರು. ಅವರು ಮತ್ತು ಸ್ಟಬ್ಸ್ ಜೊತೆಯಾಟದಲ್ಲಿ 54 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸುವ ಭರವಸೆ ಮೂಡಿತ್ತು. ಮಧ್ಯಮವೇಗಿ ಪಥಿರಾಣ 18ನೇ ಓವರ್‌ನಲ್ಲಿ ವಡೇರಾ ವಿಕೆಟ್ ಗಳಿಸಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಅರ್ಷದ್ ಖಾನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ವಿಕೆಟ್‌ ಗಳಿಸಿ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಚೆನ್ನೈ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಹಾಗೂ ಗಾಯಕವಾಡ ಅವರು ಮೊದಲ ವಿಕೆಟ್‌ಗೆ 46 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಕಾನ್ವೆ ಈ ಪಂದ್ಯದಲ್ಲಿ ತಾಳ್ಮೆಯ ಆಟವಾಡಿದರು. ಆದರೆ ಗಾಯಕವಾಡ ನಂತರ ಕ್ರೀಸ್‌ಗೆ ಬಂದ ಅಜಿಂಕ್ಯ 17 ಎಸೆತಗಳಲ್ಲಿ 21 ರನ್‌ ಗಳಿಸಿದರು. ಶಿವಂ ದುಬೆ ಅಜೇಯ 26 ರನ್‌ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು. ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 139 (ನೆಹಲ್ ವಡೇರಾ 64, ಸೂರ್ಯಕುಮಾರ್ ಯಾದವ್ 26, ಟ್ರಿಸ್ಟನ್ ಸ್ಟಬ್ಸ್ 20, ದೀಪಕ್ ಚಾಹರ್ 18ಕ್ಕೆ2, ತುಷಾರ್ ದೇಶಪಾಂಡೆ 26ಕ್ಕೆ2, ಮಥೀಷ್ ಪಥಿರಾಣ 15ಕ್ಕೆ3) ಚೆನ್ನೈ ಸೂಪರ್ ಕಿಂಗ್ಸ್: 17.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 140 (ಋತುರಾಜ್ ಗಾಯಕವಾಡ 30, ಡೆವೊನ್ ಕಾನ್ವೆ 44, ಅಜಿಂಕ್ಯ ರಹಾನೆ 21, ಶಿವಂ ದುಬೆ ಔಟಾಗದೆ 26, ಪೀಯೂಷ ಚಾವ್ಲಾ 25ಕ್ಕೆ2, ಟ್ರಿಸ್ಟನ್ ಸ್ಟಬ್ಸರ್ 14ಕ್ಕೆ1, ಆಕಾಶ್ ಮದ್ವಾಲ್ 4ಕ್ಕೆ1) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 6 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.