ಪಾಕ್‌ ಕ್ರಿಕೆಟ್‌ ಮಂಡಳಿ ಚೌಕಾಸಿ ಕರಾಚಿ: ಪಾಕಿಸ್ತಾನದಲ್ಲಿ ನಡೆಯುವ 2025ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಲಿಖಿತವಾಗಿ ಖಾತರಿ ನೀಡಿದರೆ ಮಾತ್ರ, ಪಾಕ್‌ ತಂಡವು ಭಾರತದಲ್ಲಿ ಅಕ್ಟೋಬರ್–ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ನಜಾಂ ಸೇಥಿ ಹೇಳಿದ್ದಾರೆ. ಏಕದಿನ ವಿಶ್ವಕಪ್‌ ಈ ವರ್ಷದ ಅಕ್ಟೋಬರ್‌ 5ರಿಂದ ನಡೆಯಲಿದೆ. ಬಾಬರ್‌ ಆಜಂ ಬಳಗಕ್ಕೆ ಅಹಮದಾಬಾದ್ (ಭಾರತ ವಿರುದ್ಧ ಪಂದ್ಯಕ್ಕೆ), ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತದಲ್ಲಿ ಪಂದ್ಯಗಳನ್ನು ಆಡಿಸುವುದಕ್ಕೆ ಬಿಸಿಸಿಐ ಗಮನಹರಿಸಿದೆ. ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನ ಮುಂದಿಟ್ಟಿರುವ ಪ್ರಸ್ತಾವಿತ ‘ಹೈಬ್ರಿಟ್‌ ಮಾದರಿ’ಗೆ ಜಯ್ ಶಾ ಅಧ್ಯಕ್ಷತೆಯ ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ ಅಂತಿಮ ನಿಲುವು ಸ್ಪಷ್ಟಪಡಿಸಿಲ್ಲ. ಈ ಮಾದರಿಯಂತೆ ಭಾರತ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಮತ್ತು ಪಾಕಿಸ್ತಾನ ತನ್ನ ಪಂದ್ಯಗಳನ್ನು ಸ್ವದೇಶದಲ್ಲಿ ಆಡಲಿದೆ. ಸೇಥಿ ಸೋಮವಾರ (ಮೇ 8) ದುಬೈಗೆ ತೆರಳಲಿದ್ದು ಎಸಿಸಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಬಿಸಿಸಿಐ ಮುಖ್ಯಸ್ಥ ಜಯ್ ಶಾ ಅವರು ಲಿಖಿತವಾಗಿ ಗ್ಯಾರಂಟಿ ನೀಡಿದರೆ ಮಾತ್ರ, ಪಾಕ್‌ ತಂಡವು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತದೆ ಎಂಬ ತಮ್ಮ ದೇಶದ ಧೋರಣೆಗೆ ಬೆಂಬಲ ಗಿಟ್ಟಿಸಲು ದುಬೈ ಭೇಟಿಯ ವೇಳೆ ಸೇಥಿ ಮುಂದಾಗುವ ನಿರೀಕ್ಷೆಯಿದೆ ಎಂದು ಪಿಸಿಬಿಯ ಮೂಲವೊಂದು ತಿಳಿಸಿದೆ. ಏಷ್ಯಾ ಕಪ್‌ಅನ್ನು ಲಾಹೋರ್‌ ಮತ್ತು ದುಬೈನಲ್ಲಿ ನಡೆಸುವ ಸಂಬಂಧ ಪಿಸಿಬಿಯು, ಎಸಿಸಿಗೆ ಸಲ್ಲಿಸಿರುವ ಉದ್ದೇಶಿತ ಹೈಬ್ರಿಡ್‌ ಮಾದರಿ ಕಾರ್ಯರೂಪಕ್ಕೆ ಬರದೇಹೋದಲ್ಲಿ, ಪಾಕಿಸ್ತಾನ ಏಷ್ಯಾ ಕಪ್‌ನಲ್ಲಿ ಆಡಬೇಕೆ ಬೇಡವೇ ಎಂಬ ಬಗ್ಗೆಯೂ ಸೇಥಿ ಅವರು ಕೆಲವು ಸರ್ಕಾರಿ ಅಧಿಕಾರಿಗಳ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ ಆತಿಥ್ಯಕ್ಕೆ ಸಂಬಂಧಿಸಿದಂತೆ ಎಸಿಸಿ ಸದಸ್ಯ ರಾಷ್ಟ್ರಗಳಿಗೆ ಕಠಿಣ ಮತ್ತು ದೃಢವಾದ ನಿಲುವು ರವಾನಿಸಲು ಸೇಥಿ ಅವರಿಗೆ ಸರ್ಕಾರದ ಕಡೆಯಿಂದ ಸಮ್ಮತಿ ದೊರೆತಿದೆ ಎಂದೂ ತಿಳಿಸಿವೆ. ಪಾಕಿಸ್ತಾನದ ಹೈಬ್ರಿಡ್ ಮಾದರಿ ಒಪ್ಪಬೇಕು, ಪಾಕ್‌ನಿಂದ ಆತಿಥ್ಯ ಕಿತ್ತುಕೊಂಡಲ್ಲಿ ಪಿಸಿಬಿಯು ಈ ವರ್ಷ ಬೇರೆ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಸಿಸಿ ಸದಸ್ಯರಿಗೆ ಸೇಥಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳುವ ನಿರೀಕ್ಎಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.