2023: ಮೊಟೇರಾದಲ್ಲಿ ಲಖನೌ ಮಣಿಸಿದ ಗುಜರಾತ್ ಅಹಮದಾಬಾದ್ (ಪಿಟಿಐ): ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಭಾನುವಾರ ಲಖನೌ ಸೂಪರ್ ಜೈಂಟ್ಸ್ ಎದುರು ಜಯಿಸಿ, ಐಪಿಎಲ್ ಪ್ಲೇಆಫ್‌ ಹೊಸ್ತಿಲಿಗೆ ಬಂದು ನಿಂತಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 56 ರನ್‌ಗಳ ಭಾರಿ ಅಂತರದಿಂದ ಗುಜರಾತ್ ಜಯಿಸಿತು. ಅಣ್ಣ ಹಾಗೂ ತಮ್ಮನ ಹಣಾಹಣಿಯೆಂದೇ ಈ ಪಂದ್ಯ ಗಮನ ಸೆಳೆದಿತ್ತು. ಇದರಲ್ಲಿ ಹಾರ್ದಿಕ್ ಬಳಗವು ಅಣ್ಣ ಕೃಣಾಲ್ ಪಡೆಯನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡಕ್ಕೆ ಆರಂಭಿಕ ಜೋಡಿ ಶುಭಮನ್ ಗಿಲ್ (ಅಜೇಯ 94) ಹಾಗೂ ವೃದ್ಧಿಮಾನ್ ಸಹಾ (81 ರನ್) ಗಟ್ಟಿ ಅಡಿಪಾಯ ಹಾಕಿದರು. ಇದರಿಂ ದಾಗಿ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗೆ 227 ರನ್‌ಗಳನ್ನು ಗಳಿಸಿತು. ಅನುಭವಿ ವೇಗಿ ಮೋಹಿತ್ ಶರ್ಮಾ (4–0–29–4) ಅವರ ಶಿಸ್ತಿನ ಬೌಲಿಂಗ್‌ ಎದುರು ಲಖನೌ ತಂಡಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 171 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಗುಜರಾತ್ ತಂಡವು ಒಟ್ಟು 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಗುರಿ ಬೆನ್ನಟ್ಟಿದ್ದ ಲಖನೌ ತಂಡಕ್ಕೂ ಭರ್ಜರಿ ಆರಂಭ ದೊರೆಯಿತು. ಕೈಲ್ ಮೇಯರ್ಸ್ (48 ರನ್) ಹಾಗೂ ಕ್ವಿಂಟನ್ ಡಿ ಕಾಕ್ (70 ರನ್) ಭರ್ಜರಿ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಮೊದಲ ಎಂಟು ಓವರ್‌ಗಳಲ್ಲಿ 88 ರನ್‌ಗಳು ಸೇರಿದವು. ಇದರಿಂದಾಗಿ ತಂಡವು ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಒಂಬತ್ತನೇ ಓವರ್‌ನಲ್ಲಿ ಮೋಹಿತ್ ಎಸೆತವನ್ನು ಸಿಕ್ಸರ್‌ಗೆತ್ತಲು ಪ್ರಯತ್ನಿಸಿದ ಕೈಲ್‌ ಮೇಯರ್ಸ್‌ ಅವರ ಕ್ಯಾಚ್‌ ಅನ್ನು ಚುರುಕಾಗಿ ಡೈವ್ ಮಾಡಿ ಪಡೆದ ಫೀಲ್ಡರ್ ರಶೀದ್ ಖಾನ್ ಮಿಂಚಿದರು. ಇಲ್ಲಿಯಂದ ಲಖನೌ ಪತನವೂ ಆರಂಭವಾಯಿತು. ಮೋಹಿತ್ ಸ್ವಿಂಗ್ ಎಸೆತಗಳಿಗೆ ಮಾರ್ಕಸ್ ಸ್ಟೊಯಿನಿಸ್, ಆಯುಷ್ ಬಡೋಣಿ (21; 11ಎ) ಹಾಗೂ ಕೃಣಾಲ್ ಪಾಂಡ್ಯ ಅವರ ವಿಕೆಟ್‌ಗಳು ಉರುಳಿದವು. ಇದರಿಂದಾಗಿ ಲಖನೌ ಬ್ಯಾಟಿಂಗ್ ಬೆನ್ನೆಲುಬು ಮುರಿದಂತಾಯಿತು. ಇನ್ನೊಂದೆಡೆಯಿಂದ ಸ್ಪಿನ್ನರ್ ನೂರ್ ಅಹಮದ್ ಹಾಗೂ ರಶೀದ್ ಖಾನ್ ಕೂಡ ಪರಿಣಾಮಕಾರಿ ದಾಳಿ ನಡೆಸಿದರು. ದೊಡ್ಡ ಜೊತೆಯಾಟಗಳಾಗದಂತೆ ನೋಡಿಕೊಂಡರು. ಇದರಿಂ ದಾಗಿ ಕೇವಲ 99 ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳು ಪತನವಾದವು. ಸಹಾ, ಗಿಲ್ ಮಿಂಚು: ಟಾಸ್ ಗೆದ್ದ ಲಖನೌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಮೊದಲ ವಿಕೆಟ್‌ ಜೊತೆಯಾಟದಲ್ಲಿ ಸಹಾ ಹಾಗೂ ಗಿಲ್ 142 ರನ್‌ಗಳನ್ನು ಸೇರಿಸಿ ಬೌಲರ್‌ಗಳನ್ನು ಕಾಡಿದರು. 12 ಓವರ್‌ಗಳವರೆಗೂ ಲಖನೌ ಬೌಲರ್‌ಗಳಿಗೆ ವಿಕೆಟ್ ಲಭಿಸಲಿಲ್ಲ. ಸಹಾ ಹತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರು. ಗಿಲ್ ಕೇವಲ 51 ಎಸೆತಗಳನ್ನು ಎದುರಿಸಿ 94 ರನ್‌ ಗಳಿಸಿದರು. ಅದರಲ್ಲಿ ಎರಡು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳಿದ್ದವು. ನಾಯಕ ಹಾರ್ದಿಕ್ (25; 15ಎ) ಹಾಗೂ ಡೇವಿಡ್ ಮಿಲ್ಲರ್ (ಔಟಾಗದೆ 21) ಕೂಡ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಬೃಹತ್ ಮೊತ್ತ ಗಳಿಸಿತು. 51. 56 () ://./le9e6Qkbmi # # #IPL2023 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.