2023: ಸನ್‌ರೈಸರ್ಸ್‌ ಹೈದರಾಬಾದ್‌ಗೆ 215 ರನ್‌ಗಳ ಗೆಲುವಿನ ಗುರಿ ಜೈಪುರ (ಪಿಟಿಐ): ಜೋಸ್‌ ಬಟ್ಲರ್‌ ಮತ್ತು ಸಂಜು ಸ್ಯಾಮ್ಸನ್‌ ಅವರ ಹೊಡೆಬಡಿಯ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ, ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಗೆಲುವಿಗೆ ಸವಾಲಿನ ಗುರಿ ನೀಡಿದೆ. ಜೈಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರಾಯಲ್ಸ್‌, ನಿಗದಿತ ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 214 ರನ್‌ ಗಳಿಸಿತು. ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್‌ ತಂಡದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಬಟ್ಲರ್‌ (95 ರನ್‌, 59 ಎ., 4X10, 6X4) ಮತ್ತು ನಾಯಕ ಸಂಜು (ಔಟಾಗದೆ 66, 38 ಎ., 4X4, 5X6) ಅವರು ರಾಯಲ್ಸ್‌ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದರು. ಟಾಸ್‌ ಗೆದ್ದ ಸಂಜು ಬ್ಯಾಟಿಂಗ್‌ ಆಯ್ದುಕೊಂಡರು. ಅತ್ಯುತ್ತಮ ಫಾರ್ಮ್‌ನಲ್ಲಿರುವ ಯಶಸ್ವಿ ಜೈಸ್ವಾಲ್‌ (35 ರನ್‌, 18 ಎ., 4X5, 6X2) ಮತ್ತು ಬಟ್ಲರ್‌ ಮೊದಲ ವಿಕೆಟ್‌ಗೆ ಐದು ಓವರ್‌ಗಳಲ್ಲಿ 54 ರನ್‌ ಸೇರಿಸಿ, ಭದ್ರ ಬುನಾದಿ ಹಾಕಿಕೊಟ್ಟರು. ‘ಪವರ್‌ ಪ್ಲೇ’ ಅವಧಿಯಲ್ಲಿ 61 ರನ್‌ಗಳು ಬಂದವು. ಆಕ್ರಮಣಕಾರಿ ಮೂಡ್‌ನಲ್ಲಿದ್ದ ಜೈಸ್ವಾಲ್‌ ಅವರು ಮಾರ್ಕೊ ಜೆನ್ಸೆನ್‌ ಬೌಲಿಂಗ್‌ನಲ್ಲಿ ನಟರಾಜನ್‌ಗೆ ಕ್ಯಾಚ್‌ ಕೊಟ್ಟು ಮರಳಿದರು. ಅವರು ಇದೇ ವೇಳೆ ಐಪಿಎಲ್‌ನಲ್ಲಿ 1000 ರನ್‌ ಪೂರೈಸಿದರು. ಜೈಸ್ವಾಲ್‌ ಇರುವಷ್ಟು ಹೊತ್ತು ತಣ್ಣಗಿದ್ದ ಬಟ್ಲರ್‌, ಒಂಬತ್ತನೇ ಓವರ್‌ ಬಳಿಕ ಅಬ್ಬರಿಸತೊಡಗಿದರು. ಮೊದಲ 20 ಎಸೆತಗಳಲ್ಲಿ ಅವರು ಗಳಿಸಿದ್ದು 20 ರನ್‌ ಮಾತ್ರ. ಮಯಂಕ್‌ ಮಾರ್ಕಂಡೆ ಬೌಲ್‌ ಮಾಡಿದ 9ನೇ ಓವರ್‌ನಲ್ಲಿ ಸ್ಯಾಮ್ಸನ್‌ ಎರಡು ಹಾಗೂ ಬಟ್ಲರ್‌ ಒಂದು ಸಿಕ್ಸರ್‌ ಹೊಡೆದರು. ಆ ಓವರ್‌ನಲ್ಲಿ 21 ರನ್‌ಗಳು ಬಂದವು. ಅಭಿಷೇಕ್‌ ಶರ್ಮಾ ಬೌಲ್‌ ಮಾಡಿದ ಮುಂದಿನ ಓವರ್‌ನಲ್ಲಿ ಬಟ್ಲರ್‌, ಒಂದು ಸಿಕ್ಸರ್‌ ಮತ್ತು ಬೌಂಡರಿ ಹೊಡೆದರು. ಬಟ್ಲರ್‌ ಹಾಗೂ ಸ್ಯಾಮ್ಸನ್‌ ಬೀಸಾಟ ಶುರು ಮಾಡಿದ ಬಳಿಕ ಸನ್‌ರೈಸರ್ಸ್‌ ಬೌಲರ್‌ಗಳಿಗೆ ದಿಕ್ಕುತಪ್ಪಿತು. ಇವರಿಬ್ಬರು ಪ್ರತಿ ಓವರ್‌ನಲ್ಲೂ ರನ್‌ರೇಟ್‌ 10ಕ್ಕಿಂತ ಮೇಲೆ ಇರುವಂತೆ ನೋಡಿಕೊಂಡರು. 15ನೇ ಓವರ್‌ನಲ್ಲಿ ತಂಡ ಮೊತ್ತ 150ರ ಗಡಿ ದಾಟಿತು. ಈ ಜೋಡಿ ಎರಡನೇ ವಿಕೆಟ್‌ಗೆ 13.3 ಓವರ್‌ಗಳಲ್ಲಿ 138 ರನ್‌ ಸೇರಿಸಿತು. ಬಟ್ಲರ್‌ಗೆ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ಭುವನೇಶ್ವರ್‌ ಕುಮಾರ್‌ ಬೌಲ್‌ ಮಾಡಿದ 19ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿ ವಿಕೆಟ್‌ ಒಪ್ಪಿಸಿದರು. 16ನೇ ಓವರ್‌ನಲ್ಲಿ ಮಾರ್ಕಂಡೆ ಅವರಿಗೆ ಮತ್ತೆರಡು ಸಿಕ್ಸರ್‌ಗಳನ್ನು ಹೊಡೆದ, ಸಂಜು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸನ್‌ರೈಸರ್ಸ್‌ ಬೌಲರ್‌ಗಳಿಗೆ ಇನಿಂಗ್ಸ್‌ನ ಯಾವ ಹಂತದಲ್ಲೂ ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸಲು ಆಗಲಿಲ್ಲ. ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 214 (ಯಶಸ್ವಿ ಜೈಸ್ವಾಲ್‌ 35, ಜೋಸ್‌ ಬಟ್ಲರ್‌ 95, ಸಂಜು ಸ್ಯಾಮ್ಸನ್‌ ಔಟಾಗದೆ 66, ಶಿಮ್ರೊನ್‌ ಹೆಟ್ಮಯೆರ್‌ ಔಟಾಗದೆ 7, ಭುವನೇಶ್ವರ್‌ ಕುಮಾರ್‌ 44ಕ್ಕೆ 1, ಮಾರ್ಕೊ ಜೆನ್ಸೆನ್‌ 44ಕ್ಕೆ 1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.