ಸಿರಾಜ್‌ ತಂತ್ರ ವಿಫಲಗೊಳಿಸಿದ್ದೇ ಜಯದ ಗುಟ್ಟು: ಸಾಲ್ಟ್ ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಈ ಸಲದ ಐಪಿಎಲ್‌ನಲ್ಲಿ ಮೊದಲ ಪವರ್‌ಪ್ಲೇ ಹಂತದಲ್ಲಿ ಅತ್ಯಂತ ಯಶಸ್ವಿ ಬೌಲರ್‌ ಆಗಿದ್ದಾರೆ. ಆದರೆ ಶನಿವಾರ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫೀಲ್ ಸಾಲ್ಟ್ ಅವರನ್ನು ಕೆಣಕಿದ ಸಿರಾಜ್ ದಂಡ ತೆತ್ತರು. ಸಾಲ್ಟ್ ಅವರ ಅಬ್ಬರಕ್ಕೆ ಸಿರಾಜ್ ಸುಸ್ತಾದರು. ಸಿರಾಜ್ ಅವರ ಎಸೆತಗಳಿಗೆ ಬೌಂಡರಿಯಾಚೆ ಕಳಿಸಿದ ಸಾಲ್ಟ್‌ ಡೆಲ್ಲಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಆರಂಭಿಕ ಓವರ್‌ಗಳಲ್ಲಿ ಸಿರಾಜ್ ಹಾಗೂ ಸಾಲ್ಟ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಪಂದ್ಯದ ನಂತರ ಈ ಕುರಿತು ಮಾತನಾಡಿದ ಸಾಲ್ಟ್, ‘ಎದುರಾಳಿ ತಂಡದ ಅತ್ಯಂತ ಯಶಸ್ವಿ ಬೌಲರ್‌ ಎಸೆತಗಳನ್ನು ದಂಡಿಸಿದಾಗ ನಮ್ಮ ಬಳಗದ ಡಗ್‌ಔಟ್‌ನಲ್ಲಿರುವ ಆಟಗಾರರ ಆತ್ಮವಿಶ್ವಾಸ ಹೆಚ್ಚುತ್ತದೆ. ನಮ್ಮ ತಂಡದ ಬ್ಯಾಟರ್‌ಗಳ ಆಟವೇ ಇದಕ್ಕೆ ಉತ್ತಮ ಉದಾಹರಣೆ. ಮಿಚೆಲ್ ಮಾರ್ಷ್ ತಾವೆದುರಿಸಿದ ಎರಡನೇ ಎಸೆತವನ್ನೇ ಸಿಕ್ಸರ್‌ಗೆತ್ತಿದರು. ರಿಲಿ ರುಸೊ ಅಪಾರ ಆತ್ಮವಿಶ್ವಾಸದೊಂದಿಗೆ ಕ್ರೀಸ್‌ಗೆ ಬಂದರು‘ ಎಂದರು. ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟರ್ ಸಾಲ್ಟ್, 45 ಎಸೆತಗಳಲ್ಲಿ 87 ರನ್‌ ಗಳಿಸಿದರು. ಇದೇ ಮೊದಲ ಸಲ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ತಮ್ಮ ಆರಂಭಿಕ ಎರಡು ಓವರ್‌ಗಳಲ್ಲಿ 28 ರನ್‌ಗಳನ್ನು ಕೊಟ್ಟರು. ವಿಕೆಟ್ ಗಳಿಸಲಿಲ್ಲ. ಅವರಿಗೆ ಎರಡನೇ ಸ್ಪೆಲ್ ಬೌಲಿಂಗ್ ಮಾಡುವ ಅವಕಾಶವನ್ನು ನಾಯಕ ಫಫ್ ಡುಪ್ಲೆಸಿ ನೀಡಲಿಲ್ಲ. ಆರ್‌ಸಿಬಿ ತಂಡವು ನೀಡಿದ್ದ 181 ರನ್‌ಗಳ ಗುರಿಗೆ ಉತ್ತರವಾಗಿ ಡೆಲ್ಲಿ ತಂಡವು 16.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 187 ರನ್‌ ಗಳಿಸಿ ಗೆದ್ದಿತು. ’ಆರಂಭಿಕ ಬ್ಯಾಟರ್‌ ಆಗಿ ಎದುರಾಳಿ ಬೌಲರ್‌ಗಳ ಮೇಲೆ ಎಷ್ಟು ಸಾಧ್ಯವೋ ಆಷ್ಟು ಬೇಗ ಒತ್ತಡ ಹೇರಬೇಕು. ಇದರಿಂದಾಗಿ ಅವರ ಲಯ ತಪ್ಪುತ್ತದೆ. ಆಗ ನಮ್ಮ ಕೆಲಸ ಸುಲಭ. ಉತ್ತಮ ಆರಂಭ ಒದಗಿಸಿಕೊಟ್ಟರೆ ಮುಂದೆ ಬರುವ ಬ್ಯಾಟರ್‌ಗಳಿಗೂ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಗುತ್ತದೆ‘ ಎಂದು 26 ವರ್ಷದ ಸಾಲ್ಟ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.