ಡಬ್ಲ್ಯುಟಿಸಿ ಫೈನಲ್‌: ಗಾಯಗೊಂಡಿರುವ ಕೆ.ಎಲ್ ರಾಹುಲ್ ಬದಲು ಇಶಾನ್‌ ಕಿಶನ್‌ಗೆ ಸ್ಥಾನ ಮುಂಬೈ: ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ ಅವರು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯಗೊಂಡಿರುವ ಕೆ.ಎಲ್‌.ರಾಹುಲ್‌ಗೆ ಬದಲಿ ಆಟಗಾರನಾಗಿ ಅವರಿಗೆ ಅವಕಾಶ ಲಭಿಸಿದೆ. ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಾಯಕರಾಗಿರುವ ರಾಹುಲ್‌, ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ತೊಡೆಯ ಗಾಯಕ್ಕೆ ಒಳಗಾಗಿದ್ದರು. ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳು ಮತ್ತು ಡಬ್ಲ್ಯುಟಿಸಿ ಫೈನಲ್‌ನಿಂದ ಅವರು ಹೊರಬಿದ್ದಿದ್ದರು. ಲಂಡನ್‌ನ ದಿ ಓವಲ್‌ನಲ್ಲಿ ಜೂನ್‌ 7 ರಿಂದ 11ರ ವರೆಗೆ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ದ ಹಣಾಹಣಿ ನಡೆಸಲಿದೆ. ‘ರಾಹುಲ್‌ ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಆ ಬಳಿಕ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಮರುಚೈತನ್ಯ ಶಿಬಿರದಲ್ಲಿ ಪಾಲ್ಗೊಳ್ಳುವರು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಡಗೈ ವೇಗಿ ಜೈದೇವ್‌ ಉನದ್ಕತ್‌ ಅವರು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡುವ ಬಗ್ಗೆ ಅಂತಿಮ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ. ಐಪಿಎಲ್‌ನಲ್ಲಿ ಲಖನೌ ತಂಡಕ್ಕೆ ಆಡುವ ಜೈದೇವ್‌ ಅವರು ಅಭ್ಯಾಸದ ವೇಳೆ ಜಾರಿಬಿದ್ದು ಭುಜಕ್ಕೆ ಗಾಯವಾಗಿತ್ತು. ಐಪಿಎಲ್‌ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದ ವೇಗದ ಬೌಲರ್‌ ಉಮೇಶ್‌ ಅವರು ಚೇತರಿಸಿಕೊಂಡಿದ್ದು, ಅಲ್ಪ ಪ್ರಮಾಣದ ಅಭ್ಯಾಸ ಆರಂಭಿಸಿದ್ದಾರೆ. ‘ಉಮೇಶ್‌ ಯಾದವ್‌ ಅವರು ಕೆಕೆಆರ್‌ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಬಿಸಿಸಿಐ ವೈದ್ಯರ ತಂಡವು ಕೆಕೆಆರ್‌ ವೈದ್ಯರ ಜತೆ ಸಂಪರ್ಕದಲ್ಲಿದ್ದು, ಉಮೇಶ್‌ ಅವರ ಫಿಟ್‌ನೆಸ್‌ ಮೇಲೆ ನಿಗಾ ಇಟ್ಟಿದೆ’ ಎಂದು ಪ್ರಕಟಣೆ ಹೇಳಿದೆ. ಋತುರಾಜ್ ಗಾಯಕವಾಡ್‌, ಮುಕೇಶ್‌ ಕುಮಾರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರು ಮೀಸಲು ಆಟಗಾರರಾಗಿ ಭಾರತ ತಂಡದ ಜತೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.