ಡುಪ್ಲೆಸಿ–ಜೈಸ್ವಾಲ್ ಹಣಾಹಣಿಗೆ ವೇದಿಕೆ ಸಜ್ಜು ಜೈಪುರ(ಪಿಟಿಐ): ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಅನುಭವಿ ಬ್ಯಾಟರ್ ಫಫ್ ಡುಪ್ಲೆಸಿ ಅವರ ಪೈಪೋಟಿಗೆ ಸವಾಯಿ ಮಾನಸಿಂಗ್ ಕ್ರೀಡಾಂಗಣ ಸಜ್ಜಾಗಿದೆ. ಇದರಿಂದಾಗಿ ಫಫ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಜೈಸ್ವಾಲ್ ಆರಂಭಿಕ ಬ್ಯಾಟರ್ ಆಗಿ ಮಿಂಚುತ್ತಿರುವ ರಾಜಸ್ಥಾನ ರಾಯಲ್ಸ್ ಭಾನುವಾರ ಮುಖಾಮುಖಿಯಾಗಲಿವೆ. ಈ ಸಲದ ಟೂರ್ನಿಯಲ್ಲಿ ಇಬ್ಬರೂ ರನ್‌ಗಳನ್ನು ಹರಿಸುತ್ತಿದ್ದಾರೆ. ಇದರಿಂದಾಗಿ ಈ ಪಂದ್ಯವು ಕುತೂಹಲ ಕೆರಳಿಸಿದೆ. ಫಫ್ 11 ಇನಿಂಗ್ಸ್‌ಗಳಲ್ಲಿ ಆಡಿ 576 ರನ್ ಹಾಗೂ ಜೈಸ್ವಾಲ್ 12 ಇನಿಂಗ್ಸ್‌ಗಳಲ್ಲಿ 575 ರನ್‌ ಗಳಿಸಿದ್ದಾರೆ. ಫಫ್ ಆರು ಅರ್ಧಶತಕ ಹೊಡೆದಿದ್ದಾರೆ. ಅದೇ ಜೈಸ್ವಾಲ್ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅಷ್ಟೇ ಅಲ್ಲ; ಪ್ಲೇ ಆಫ್‌ ಹಂತ ಪ್ರವೇಶಿಸುವ ಹಾದಿಯಲ್ಲಿ ಈ ಪಂದ್ಯದಲ್ಲಿ ಜಯಿಸುವುದು ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಆದ್ದರಿಂದ ಇವರಿಬ್ಬರ ಪಾತ್ರವೂ ಮುಖ್ಯವಾಗಿದೆ. ಅದರಲ್ಲೂ ಡುಪ್ಲೆಸಿ, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೇಲೆಯೇ ಆರ್‌ಸಿಬಿಯ ಬ್ಯಾಟಿಂಗ್ ಅವಲಂಬಿತವಾಗಿದೆ. ಉಳಿದ ಬ್ಯಾಟರ್‌ಗಳು ಈ ಟೂರ್ನಿಯಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಡಿಲ್ಲ. ರಾಜಸ್ಥಾನ ತಂಡದಲ್ಲಿರುವ ಅನುಭವಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ಆರ್. ಅಶ್ವಿನ್ ಹಾಗೂ ಕುಲದೀಪ್ ಯಾದವ್ ಅವರ ಸವಾಲನ್ನು ಆರ್‌ಸಿಬಿ ಬ್ಯಾಟರ್‌ಗಳು ಮೀರಿ ನಿಲ್ಲಬೇಕಿದೆ. ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಸೋತಿತ್ತು. ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮುಂದಾಳತ್ವದ ಬೌಲಿಂಗ್ ಪಡೆಯೂ ಮುಗ್ಗರಿಸಿತ್ತು. ಸಿರಾಜ್, ಜೋಶ್ ಹ್ಯಾಜಲ್‌ವುಡ್, ವೈಶಾಖ ವಿಜಯಕುಮಾರ್ ಹಾಗೂ ಸ್ಪಿನ್ನರ್ ವಣಿಂದು ಹಸರಂಗಾ ಅವರ ಮುಂದೆ ಯಶಸ್ವಿ, ಬಟ್ಲರ್, ಶಿಮ್ರೊನ್ ಹೆಟ್ಮೆಯರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಕಟ್ಟಿಹಾಕುವ ಸವಾಲಿದೆ. ಆರ್‌ಸಿಬಿ ತಂಡಕ್ಕೆ ಈ ಹಣಾಹಣಿಯೂ ಸೇರಿದಂತೆ ಮೂರು ಪಂದ್ಯಗಳು ಬಾಕಿಯಿವೆ. ಸದ್ಯ ಹತ್ತು ಅಂಕ ಗಳಿಸಿರುವ ಬೆಂಗಳೂರು ತಂಡವು ಈ ಮೂರರಲ್ಲಿ ಜಯಿಸಿದರೆ ಪ್ಲೇಆಫ್‌ ಪ್ರವೇಶದ ಆಸೆ ಜೀವಂತವಾಗುಳಿಯಬಹುದು. 12 ಅಂಕ ಹೊಂದಿರುವ ರಾಜಸ್ಥಾನಕ್ಕೆ ಇನ್ನೆರಡು ಪಂದ್ಯಗಳು ಬಾಕಿಯಿವೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅದಕ್ಕೂ ಗೆಲುವು ಅನಿವಾರ್ಯ. ಪಂದ್ಯ ಅರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.